ಉಡುಪಿ : ತೀವ್ರ ಸಂಚಲನ ಸೃಷ್ಟಿಸಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಉಡುಪಿ ಪೊಲೀಸರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ.
ವಿಶಾಲ ಗಾಣಿಗ ಕೊಲೆ ಸಂಬಂಧ ಆಕೆಯ ಪತಿ ರಾಮಕೃಷ್ಣ ಗಾಣಿಗರನ್ನು ಪೊಲೀಸರು ಬಂಧಿಸಿದ್ದಾರೆ. ದುಬೈನಲ್ಲಿದ್ದುಕೊಂಡು ಪತ್ನಿಯ ಕೊಲೆಗೆ ರಾಮಕೃಷ್ಣ ಅವರು ಸಂಚು ರೂಪಿಸಿದ್ದ ಎಂಬ ಅಂಶ ಪೊಲಿಸ್ ಮೂಲಗಳಿಂದ ಧೃಡಪಟ್ಟಿದೆ.
ದುಬೈಯಿಂದ ಊರಿಗೆ ಬಂದಿದ್ದ ವಿಶಾಲ ಗಾಣಿಗರನ್ನು ಜುಲೈ12ರಂದು ಬ್ರಹ್ಮಾವರ ಸಮೀಪದ ಉಪ್ಪಿಕೋಟೆಯಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ವಿಶಾಲ ಗಾಣಿಗ ಪತಿ ರಾಮ ಕೃಷ್ಣ ಅವರು ಸುಪಾರಿ ಕಿಲ್ಲರ್ಸ್ ಗಳ ಮೂಲಕ ಕೊಲೆ ಮಾಡಿಸಿದ್ದಾರೆ ಎಂಬುವುದು ಧೃಡಪಟ್ಟಿದೆ.
ಇದಕ್ಕಾಗಿ ರಾಮಕೃಷ್ಣ ಅವರು ಉತ್ತರ ಭಾರತ ಮೂಲದ ಸುಪಾರಿ ಹಂತಕರನ್ನು ಹಣ ಕೊಟ್ಟು ಗೊತ್ತು ಮಾಡಿದ್ದರು ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ರಾಮಕೃಷ್ಣನ ಆಕ್ರಮ ಸಂಬಂಧ ಅಥವಾ ಆಸ್ತಿ ವ್ಯವಹಾರವೇ ವಿಶಾಲ ಕೊಲೆಗೆ ಕಾರಣವಾಯಿತಾ ಎಂಬ ಸಂಶಯ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಕೊಲೆ ಮಾಡಿದ ಬಾಡಿಗೆ ಹಂತಕರನ್ನು ಆಂಧ್ರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದು ಆಗ ಕೊಲೆ ಆರೋಪಿಗಳು ರಾಮಕೃಷ್ಣನ ಹೆಸರನ್ನು ಉಲ್ಲೇಖಿಸಿದ್ದರು.
ಇಂದು ಹಂತಕರನ್ನು ಉಡುಪಿಗೆ ಕರೆ ತಂದಿರುವ ಪೊಲೀಸರು ಕೊಲೆಯ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.