ಉಡುಪಿ: ಮಾರಾಟಕ್ಕೆಂದು ತಂದಿದ್ದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಡುಪಿಯ ಬೈಂದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಆಲಿಖಾನ್ (31), ಅಮ್ಜದ್ ಖಾನ್ (33), ಇಕ್ರಾರ್ ಖಾನ್ (30), ಗೋಪಾಲ್ ಅಮ್ಲಾವಾರ್ (35) ಎಂಬವರು ಬಂಧಿತ ಆರೋಪಿಗಳು.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಶ್ವರ ದಾಲಿಚಂದ್ ಪೊರ್ವಾರ್ ಎಂಬುವವರು ಮುಂಬೈನಲ್ಲಿ ಚಿನ್ನವನ್ನು ಖರೀದಿ ಮಾಡಿ ಮಂಗಳೂರು, ಹೈದರಾಬಾದ್ ಮುಂತಾದೆಡೆಗಳಲ್ಲಿ ಮಾರಾಟ ಮಾಡುವ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದರು.
ಅದೇ ರೀತಿ ಜೂ.14ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನ ಮಾರಾಟ ಮಾಡಲೆಂದು 466.960 ಗ್ರಾಂ ಚಿನ್ನಾಭರಣವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಬಸ್‌ನಲ್ಲಿ ತಂದಿದ್ದರು.
ಜೂ. 16ರಂದು ಈ ಬಸ್ ಬೆಳಗ್ಗೆ 7.15ಕ್ಕೆ ಬೈಂದೂರು ತಲುಪಿದ್ದು, ಅಲ್ಲಿ ಶಿರೂರು ಸಮೀಪ ಹೊಟೇಲ್ ಬಳಿ ಬೆಳಗ್ಗಿನ ಉಪಾಹಾರ ಸೇವನೆಗಾಗಿ ಬಸ್ ನಿಲ್ಲಿಸಿದ್ದಾರೆ.
ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಉಪಾಹಾರ ಸೇವಿಸಲು ಹೊಟೇಲ್‌ಗೆ ತೆರಳಿದ್ದ ವೇಳೆ ಬಂದಿದ್ದ ಕಳ್ಳರು ಬಸ್‌ನಲ್ಲಿದ್ದ ಸೂಟ್‌ಕೇಸ್‌ನ್ನು ಪಡೆದುಕೊಂಡು ಬಸ್ ಹಿಂಭಾಗಕ್ಕೆ ತೆರಳಿ ಸೂಟ್‌ಕೇಸ್ ಒಡೆದು ಚಿನ್ನವನ್ನು ಕದ್ದೊಯ್ದಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.