ಮಂಗಳೂರು: ‘ಜನಸಾಮಾನ್ಯರ ಮುಗ್ದತೆ ಮತ್ತು ಮೌನವೇ ಈವತ್ತು ಬಿಜೆಪಿ ಸರ್ಕಾರದ ದಬ್ಬಾಳಿಕೆಗೆ ಕಾರಣ’ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಮತ್ತು ರಾಜ್ಯದಲ್ಲಿ ದುಬಾರಿ ರಾಜಕೀಯ ನಡೆಯುತ್ತಿದೆ. ತೆರಿಗೆ ಹಾಗೂ ಬೆಲೆ ಏರಿಕೆಯನ್ನು ಮಾಡಿ ಜನರ ಮೇಲೆ ಬಿಜೆಪಿ ಸರಕಾರ ಶೋಷಣೆ ಮಾಡುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲ. ಉತ್ತಮ ನಾಯಕತ್ವದ ಕೊರತೆಯೇ ಭಾರತದ ಇವತ್ತಿನ ಪರಿಸ್ಥಿತಿಗೆ ಕಾರಣ. ಏಕಾಏಕಿ ಅಡುಗೆ ಅನಿಲಕ್ಕೆ 25 ರೂಪಾಯಿ ಏರಿಕೆ ಮಾಡಿರುವ ಈ ಸರಕಾರಕ್ಕೆ ಮಹಿಳೆಯರ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇದೆ. ಜನ ಸಾಮಾನ್ಯರ ನಾಡಿ ಮಿಡಿತ ಅರಿಯದ ಸರಕಾರ ಇವತ್ತು ಅಸ್ತಿತ್ವದಲ್ಲಿದೆ. ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಹೋಟೆಲುಗಳಲ್ಲಿಯೂ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಾಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 1ರಿಂದ 2 ರೂಪಾಯಿ ಹೆಚ್ಚಾದಾಗ ಆಕಾಶ-ಭೂಮಿ ಒಂದು ಮಾಡುತ್ತಿದ್ದ, ಬಿಜೆಪಿ ಸರಕಾರ ಈಗ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು. ಇನ್ನೂ ಸಚಿವ ಶ್ರೀರಾಮಲು ಆಪ್ತಸಹಾಯಕನ ಬಂಧನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನರನ್ನು ವಂಚಿಸುತ್ತಾ ಬಂದಿದೆ. ಈ ರೀತಿ ವಂಚಿಸುವ ಸರಕಾರ ವಿರುದ್ಧ ಹೋರಾಟ ಮಾಡಬೇಕು. ಪ್ರತಿಬಾರಿ ಅಧಿಕಾರ ಕ್ಕೆ ಬಂದಾಗ ಜನರನ್ನ ವಂಚಿಸುವುದೆ ಇವರ ಕೆಲಸ ಆಗಿದೆ. ಇವರಿಗೆ ಸರಕಾರ ನಡೆಸುವುದಕ್ಕೆ ಜನರ ಸಂಪೂರ್ಣ ಬೆಂಬಲ ಇಲ್ಲ ಅಂದ್ರು.