ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ (ರಿ.) ಮಂಗಳೂರು ಇದರ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-7″ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿ ಕರಾವಳಿ ಉತ್ಸವ ಮೈದಾನದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ‘ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುತ್ತಾ ಅದನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿದ ಪಿಲಿನಲಿಕೆ ಸ್ಪರ್ಧೆ ಯಶಸ್ವಿಯಾಗಿ 6 ಆವೃತ್ತಿಗಳನ್ನು ಪೂರೈಸಿದ್ದು, ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಅದನ್ನು ಮುಂದುವರೆಸಲು ಅಸಾಧ್ಯವಾಗಿತ್ತು.
ಇದೀಗ ಪಿಲಿನಲಿಕೆ-7 ಸ್ಪರ್ಧಾಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ 12 ತಂಡಗಳು ಭಾಗವಹಿಸಲಿದ್ದು ಬಹುಮಾನ ರೂಪದಲ್ಲಿ ಪ್ರಥಮ ರೂ.3,00,000/- ಮತ್ತು ಫಲಕ, ದ್ವಿತೀಯ ರೂ.2,00,000/- ಮತ್ತು ಫಲಕ, ತೃತೀಯ ರೂ.1,00,000/- ಮತ್ತು ಫಲಕ ನೀಡಲು ನಿರ್ಧರಿಸಿದ್ದೇವೆ.
ಹಾಗೆಯೇ ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ ರೂ. 50,000/- ನಗದು ಬಹುಮಾನಗಳನ್ನು ನೀಡಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ರೂ.50,000/- ವನ್ನು ಪ್ರೋತ್ಸಾಹಕ ರೂಪದಲ್ಲಿ ನೀಡಲಾಗುವುದು.
ಈ ಬಾರಿಯ ಪಿಲಿನಲಿಕೆ-7ಕ್ಕೆ ಬಾಲಿವುಡ್‌ನ ಖ್ಯಾತ ತಾರೆಯರಾದ ಸುನಿಲ್ ಶೆಟ್ಟಿ, ಪೂಜಾ ಹೆಗ್ಡೆ ಹಾಗೂ ಹೆಸರಾಂತ ನಟ, ಇತ್ತೀಚಿನ ಕಾಂತಾರ ಚಲನಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ನಟ ನಟಿಯರು, ತುಳು ರಂಗಭೂಮಿಯ ಹೆಸರಾಂತ ಕಲಾವಿದರು ತಾರಾ ಮೆರುಗನ್ನು ನೀಡಲಿದ್ದಾರೆ ಎಂದು ಮಿಥುನ್ ರೈ ತಿಳಿಸಿದ್ದಾರೆ.
ಪಿಲಿನಲಿಕೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡಲು ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಕೂಡಾ ಅವಕಾಶ ನೀಡಲು ಮನವಿ ಮಾಡುವುದಾಗಿ ಮಿಥುನ್ ರೈ ಮಾಹಿತಿ ನೀಡಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಪಿಲಿನಲಿಕೆ ತಂಡದಿಂದ ಕಾರ್ಯಕ್ರಮ ನೀಡಲು ಆಹ್ವಾನವಿದೆ. ರಾಜಕೀಯರಹಿತವಾಗಿ ಈ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಲೆಗೆ ಮತ್ತು ಅಶಕ್ತ ಕಲಾವಿದರಿಗೆ ವೇದಿಕೆ ನೀಡುವುದು.
ತುಳುವರ ಸಾಂಪ್ರದಾಯಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಿಲಿನಲಿಕೆ -7 ಕಾರ್ಯಕ್ರಮ ಪಿಲಿನಲಿಕೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವುದಾಗಿ ಮಿಥುನ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ|ಶಿವಶರಣ್ ಶೆಟ್ಟಿ , ನವೀನ್ ಶೆಟ್ಟಿ ಎಡ್ಮೆಮಾರ್, ಅವಿನಾಶ್, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.