Connect with us

DAKSHINA KANNADA

ನಗರ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಮೇಯರ್ ಕಚೇರಿಗೆ ಮುತ್ತಿಗೆ- ಸುನೀಲ್ ಕುಮಾರ್ ಬಜಾಲ್

Published

on

ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡದೆ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದರು.


ಅವರು ಇಂದು ನಗರದ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಆಗ್ರಹಿಸಿ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


ಮಂಗಳೂರು ಮಹಾನಗರ ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗೀ ಲಾಭಿಗೆ ಮಣಿದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ನಗರ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಇನ್ನು ಸ್ಮಾರ್ಟ್ ಸಿಟಿ ಹೆಸರಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಗೆದು ಕಾಂಕ್ರೀಟಿಕರಣ ನಡೆಸಿ ಕಮಿಷನ್ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಬಿಜೆಪಿ ಆಡಳಿತ ಮತ್ತು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಗೆ ನಗರ ಆರೋಗ್ಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೆ?.

ಕಳೆದ ಒಂದು ದಶಕಗಳಿಂದ ಖಾಲಿ ಬಿದ್ದಿರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಎಂದಾದರು ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆಯೇ ? ಎಂದು ಟೀಕಿಸಿದರು.‌


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕುಮಾರ್ ಬಜಾಲ್ ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಅದರದೇ ಆದ ಹಿನ್ನಲೆ ಇದೆ.

ಹಿಂದೆ ಇದು ಸರಕಾರಿ ಹೆರಿಗೆ ಆಸ್ಪತ್ರೆಯಾಗಿ ಹೆಸರುವಾಸಿಯಾಗಿತ್ತು ಆದರೆ ಇವತ್ತು ಈ ನಗರ ಆರೋಗ್ಯ ಕೇಂದ್ರದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆಗಳು ಸರಿಯಾಗಿ ಸಿಗದಂತಾಗಿದೆ.

ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ಸಂಪೂರ್ಣವಾಗಿ ಕಡೆಗಣಿಸಿವೆ. ನಗರ ಪಾಲಿಕೆ ಅಡಿಯಲ್ಲಿರುವ 5 ಆರೋಗ್ಯ ಕೇಂದ್ರವನ್ನು ನಗರದ ವಿವಿಧ ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗೀ ಮೆಡಿಕಲ್ ಲಾಭಿಗೆ ಬಲಿಯಾಗಿದೆ. ಇನ್ನು ರಾಷ್ಟೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ನಡೆಸುವ 10 ನಗರ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಸಹಿತ ಹಲವಾರು ಗಂಭೀರ ಸಮಸ್ಯೆಗಳಿವೆ.

ಇವುಗಳನ್ನೆಲ್ಲ ಸರಿಪಡಿಸದೆ ಈಗ ಮತ್ತೆ ನಮ್ಮ ಕ್ಲಿನಿಕ್ ಹೆಸರಲ್ಲಿ 7 ನಗರ ಆರೋಗ್ಯ ಕೇಂದ್ರಗಳು ನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರಲಿದ್ದು ಅದನ್ನೂ ನಡೆಸುವಲ್ಲಿ ಸರಕಾರಗಳು ವಿಫಲವಾದಲ್ಲಿ ನಮ್ಮ ಹೋರಾಟವನ್ನು ತೀವೃ ರೀತಿಗೆ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಲೇಡಿಹಿಲ್ ವೃತ್ತ ನಾರಾಯಣ ಗುರು ವೃತ್ತ ಆಗಬೇಕೆಂಬ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸುನಿಲ್ ಕುಮಾರ್ ಸಹಿತ ಎಲ್ಲಾ ಶಾಸಸಕರು ಈ ಪ್ರದೇಶಕ್ಕೆ ಭೇಟಿ ನೀಡುವಾಗ ಅವ್ಯವಸ್ಥೆಯಿಂದ ಕೂಡಿರುವ ಈ ಆರೋಗ್ಯ ಕೇಂದ್ರ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯನ್ನು ಬೆಂಬಲಿಸಿ ಸಾಮರಸ್ಯ ‌ಮಂಗಳೂರು ಇದರ ಸಂಚಾಲಕರಾದ ಮಂಜುಳಾ ನಾಯಕ್ ಮಾತನಾಡಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪಾಲಿಕೆ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಅರುಣ್ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದರು. ಇರುವ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದೆಂಬ ಭರವಸೆಯನ್ನಿತ್ತರು.

ಪ್ರತಿಭಟನೆಯಲ್ಲಿ ಸಿಪಿಐಎಂ ನಗರ ಸಮಿತಿ ಮುಖಂಡರಾದ ಲೋಕೇಶ್ ಎಂ, ಭಾರತೀ ಬೋಳಾರ, ಸಾಧಿಕ್ ಕಣ್ಣೂರು, ನೌಶದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಡಿವೈಎಫ್ಐ ಮುಖಂಡರಾದ ಜಗದೀಶ್ ಬಜಾಲ್, ಮಾಧುರಿ ಬೋಳಾರ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ಶಾಹಿದ್, ಸಮಝ್ ಮುಂತಾದವರು ಉಪಸ್ಥಿತರಿದ್ದರು.

DAKSHINA KANNADA

‘ಕೇಸರಿಕರಣ’ವಾದ ಡಿಡಿ ನ್ಯೂಸ್..! ಚರ್ಚೆಗೆ ಕಾರಣವಾದ ಹೊಸ ಲೋಗೋ..!

Published

on

ಮಂಗಳೂರು : ಚುನಾವಣಾ ಸಮಯದಲ್ಲೇ ದೇಶದ ಸರ್ಕಾರಿ ಚಾನೆಲ್ ದೂರದರ್ಶನ ತನ್ನ ಲೋಗೋದ ಬಣ್ಣವನ್ನು ಬದಲಾಯಿಸಿದೆ. ಡಿಡಿ ನ್ಯೂಸ್‌ ತನ್ನ ಲೋಗೋ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. 1959 ರಲ್ಲಿ ಆರಂಭವಾಗಿದ್ದ ದೂರದರ್ಶನದ ಲೋಗೋ ನೀಲಿ ಬಣ್ಣದಾಗಿದ್ದು, ಇದೀಗ ಚುನಾವಣೆಯ ಹೊಸ್ತಿಲಲ್ಲಿ ಕೇಸರಿ ಬಣ್ಣಕ್ಕೆ ಬದಲಾಯಿಸಿದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ದೇಶದಲ್ಲಿ ಎಲ್ಲವನ್ನೂ ಕೇಸರಿಕರಣ ಮಾಡುವ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.

ಕೇಂದ್ರ ಸರ್ಕಾರದ ಪ್ರಸಾರಭಾರತಿ ಅಡಿಯಲ್ಲಿ ಬರುವ ದೂರದರ್ಶನ ಏಕಾಏಕಿ ತನ್ನ ಲೋಗೋವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಇದನ್ನು ದೂರದರ್ಶನ ತನ್ನ ಅಧಿಕೃತ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ಲೋಗೋ ಕೇವಲ ದೃಶ್ಯ ಸೌಂದರ್ಯದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಮೌಲ್ಯಗಳು ಒಂದೇ ಆಗಿರುವಾಗ, ನಾವು ಈಗ ಹೊಸ ಅವತಾರದಲ್ಲಿ ಸಿಗಲಿದ್ದೇವೆ. ಹಿಂದೆಂದಿಗಿಂತಲೂ ಉತ್ತಮ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ. ಎಲ್ಲಾ ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ! ” ಎಂದು DD News ತನ್ನ ಅಧಿಕೃತ ‘X’ ಹ್ಯಾಂಡಲ್‌ನಲ್ಲಿ ಅದರ ಹೊಸ ಲೋಗೋದ ವೀಡಿಯೊದೊಂದಿಗೆ ಪೋಸ್ಟ್ ಮಾಡಿದೆ. ಜೊತೆಗೆ “ಕೇವಲ ಧೈರ್ಯದ ಬರವಸೆಯಲ್ಲ..ವೇಗದ ಮತ್ತು ನಿಖರತೆಯ ಬರವಸೆ ; ಹಕ್ಕುಗಳ ಮತ್ತು ಸತ್ಯದ ಬರವಸೆ ; ಸಂವೇದನೆಯ ಹಾಗೂ ಸತ್ಯದ ಬರವಸೆ ;  ಯಾಕೆಂದರೆ ಡಿಡಿ ನ್ಯೂಸ್ ನಲ್ಲಿ ಬಂದರೆ ಅದು ಸತ್ಯ! ಡಿಡಿ ನ್ಯೂಸ್ – ಭರೋಸಾ ಸಚ್ ಕಾ..” ಎಂದು ಹೇಳಿಕೊಂಡಿದ್ದಾರೆ.

2012 ಮತ್ತು 2014 ರ ನಡುವೆ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಈ ಬೆಳವಣಿಗೆಯನ್ನು ಟೀಕಿಸಿದ್ದಾರೆ. ಪ್ರಸಾರ ಭಾರತಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ (AIR) ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ.”ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ತನ್ನ ಬ್ರ್ಯಾಂಡಿಂಗ್‌ಗಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿರುವುದು ಸರಿಯಲ್ಲ” ಎಂದು ಸಿರ್ಕಾರ್ ಸಾಮಾಜಿಕ ಮಾಧ್ಯಮ ಸೈಟ್ ‘X’ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ “ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ನಾನು ಪರಿಗಣಿಸುತ್ತೇನೆ” ಎಂದು ಸಿರ್ಕಾರ್ ಹೇಳಿದ್ದಾರೆ, ಲೋಗೋ ಬದಲಾವಣೆ ಮಾಡಿರುವ ಸಮಯವನ್ನು ಪ್ರಶ್ನಿಸಿದ ಅವರು. “ಇದು ರಾಜ್ಯಗಳಲ್ಲಿ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಕೇಸರಿ ಒಂದು ನಿರ್ಧಿಷ್ಟ ಧರ್ಮವನ್ನು ಸೂಚಿಸುವ ಬಣ್ಣವಾಗಿದ್ದು ಅದನ್ನು ದೂರದರ್ಶನ ಬಳಸಿಕೊಂಡಿದ್ದು ತಪ್ಪು” ಎಂದಿದ್ದಾರೆ.

ದೂರದರ್ಶನದ ಈ ಬೆಳವಣಿಗೆಯ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದು, ಹೊಸ ಸಂಸತ್‌ನಲ್ಲಿ ಒಳಗೆ ಎಲ್ಲಾ ಕಡೆ ಕೇಸರಿಕರಣ ಮಾಡಲಾಗಿದೆ. ಇದೀಗ ದೇಶದ ಜನರನ್ನು ದೂರದರ್ಶನದ ಮೂಲಕ ಕೇಸರಿಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

Continue Reading

DAKSHINA KANNADA

ಪದ್ಮರಾಜ್ ಪೂಜಾರಿ ಪ್ರಚಾರ ಶೈಲಿ..! ಜನಾರ್ದನ ಪೂಜಾರಿಯನ್ನ ನೆನೆದ ಜನ…!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಪ್ರಚಾರ ಶೈಲಿಗೆ ಜನ ಜನಾರ್ದನ ಪೂಜಾರಿಯವರನ್ನು ನೆನಪಿಸಿಕೊಳ್ತಾ ಇದ್ದಾರೆ. ಗುರುವಿನಂತೆ ಶಿಷ್ಯ ಕೂಡಾ ಪ್ರಚಾರ ಮಾಡ್ತಾ ಇರೋದು ನೋಡಿದ ಜನ ಇವರು ನಿಜವಾಗಿಯೂ ಜನಾರ್ದನ ಪೂಜಾರಿ ಅವರಂತೆ ಜನನಾಯಕ ಅಂತಿದ್ದಾರೆ.

ಜನಾರ್ದನ ಪೂಜಾರಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೊನೆಯ ಸ್ಪರ್ಧೆಯನ್ನ ನೀಡಿದ್ದರು. ಹತ್ತು ವರ್ಷದ ಬಳಿಕ ಅವರ ಶಿಷ್ಯ ಪದ್ಮರಾಜ್ ಪೂಜಾರಿ ಈಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಪದ್ಮರಾಜ್ ಪೂಜಾರಿ ಅವರು ಜನರೊಂದಿಗೆ ಬೆರೆಯುವ ರೀತಿ, ಜನರಿಗೆ ತೋರಿಸುವ ಪ್ರೀತಿ, ಹಾಗೂ ಪ್ರಚಾರದ ವೇಳೆ ಅವರು ವರ್ತಿಸೋ ರೀತಿ ನೋಡಿದ ಸಾಕಷ್ಟು ಜನ ಜನಾರ್ಧನ ಪೂಜಾರಿ ಅವರ ಚುನಾವಣ ಪ್ರಚಾರದ ವೈಖರಿಯನ್ನು ನೆನಪಿಸಕೊಳ್ಳುವಂತೆ ಮಾಡಿದೆ.

ಸಂಸದರಾಗಿ , ಕೇಂದ್ರ ಸಚಿವರಾಗಿ, ಬಡವರ ಬಂಧು ಅಂತ ಕರೆಸಿಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ರೂ, ಜನರು ಮಾತ್ರ ಅವರನ್ನು ಮರೆತಿಲ್ಲ. ಜನಾರ್ದನ ಪೂಜಾರಿಯವರು ರಾಜಕೀಯದಿಂದ ದೂರ ಉಳಿದು ವರ್ಷಗಳೇ ಕಳೆದ್ರು ಜನರಿಗೆ ಅವರ ಮೇಲಿರೋ ಪ್ರೀತಿ ಅಭಿಮಾನ ಕಡಿಮೆ ಆಗಿಲ್ಲ. ಚುನಾವಣಾ ಸಮುಯದಲ್ಲಿ ಪ್ರಚಾರಕ್ಕೆ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಅವರ ಪ್ರಚಾರ ವೈಖರಿಯನ್ನಂತು ಜನ ಮರೆಯೋದೆ ಕಷ್ಟ. ಮುಂಜಾನೆಯಿಂದ ರಾತ್ರಿ ವರೆಗೂ ಅವರು ಮತಯಾಚನೆ ಮಾಡುತ್ತಿದ್ದ ರೀತಿಗೆ ಜನರೇ ದಂಗಾಗಿ ಹೋಗ್ತಾ ಇದ್ರು. ಇನ್ನು ನಡೆದುಕೊಂಡು ಮತಯಾಚಿಸೋ ಜನಾರ್ದನ ಪೂಜಾರಿ ಅವರ ಜೊತೆ ಕಾರ್ಯಕರ್ತರು ಓಡಿಕೊಂಡು ಹೋಗಬೇಕು ಅನ್ನುವಷ್ಟು ವೇಗವಾಗಿ ಸಾಗ್ತಾ ಇದ್ರು. ಅದೇ ಸೇಮ್ ಟು ಸೇಮ್ ಅನ್ನುವಂತೆ ಪದ್ಮರಾಜ್ ಪೂಜಾರಿ ಕೂಡಾ ಪ್ರಚಾರ ಮಾಡ್ತಾ ಇದ್ದಾರೆ.

ಪದ್ಮರಾಜ್ ಪೂಜಾರಿಯವರು ಒಮ್ಮೆ ಬೈಕ್‌ನಲ್ಲಿ ಮತಯಾಚನೆಗೆ ತೆರಳಿದ್ರೆ, ಮತ್ತೊಮ್ಮೆ ಜೀಪ್ ಏರಿ ರೋಡ್ ಶೋ ನಡೆಸ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರೆ ಅವರ ವೇಗದ ನಡಿಗೆ ಮತ್ತು ಓಡಿಕೊಂಡು ಹೋಗುವ ಅವರ ಶೈಲಿ ಜನಾರ್ದನ ಪೂಜಾರಿ ಅವರನ್ನು ನೆನಪಿಸುತ್ತದೆ. ಎಲ್ಲೇ ಹೋದ್ರು ಜನ ಪದ್ಮರಾಜ್ ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾರೆ. ಅದೇ ರೀತಿ ಪದ್ಮಾರಾಜ್ ಕೂಡಾ ಜನರಿಗೆ ಬಹಳಷ್ಟು ಹತ್ತಿರವಾಗಿ ಅಭಿಮಾನ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸದ್ಯಕ್ಕಂತು ಜನ ಜನಾರ್ದನ ಪೂಜಾರಿ ಅವರ ಸ್ಥಾನ ತುಂಬಲು ಪದ್ಮರಾಜ್ ಅವರೇ ಸರಿಯಾದ ಅಭ್ಯರ್ಥಿ ಅಂತ ಮಾತನಾಡುತ್ತಿದ್ದು, ಅವರ ಗೆಲುವಿಗೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Continue Reading

BELTHANGADY

ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

Published

on

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.

Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Continue Reading

LATEST NEWS

Trending