ಮಂಗಳೂರು: ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಿದೆ. ಜೊತೆಗೆ ಶಾಲೆಗೆ ಆಗಮಿಸುವ ಮೊದಲ ದಿನ ಮಕ್ಕಳಿಗೆ ಸಿಹಿ ವಿತರಿಸಿ ಬರಮಾಡಿಕೊಳ್ಳಬೇಕು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಖುಷಿಯಿಂದ ಶಾಲೆಗೆ ಬರುವಂಥ ವಾತಾವರಣ ನಿರ್ಮಿಸಬೇಕೆಂದು ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ನಿರ್ದೇಶನ ನೀಡಿದೆ.
2022-23ನೇ ಶೈಕ್ಷಣಿಕ ವರ್ಷವನ್ನು ನಿಗದಿತ ಸಮಯಕ್ಕಿಂತ 15 ದಿನ ಮೊದಲೇ ಆರಂಭಿಸಲಾಗುತ್ತಿದೆ. ಈ ವರ್ಷವನ್ನು “ಕಲಿಕಾ ಚೇತರಿಕೆ ವರ್ಷ’ವೆಂದು ಘೋಷಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಹಿಂದಿನ ವರ್ಷದ ಬಸ್ ಪಾಸ್‌ಗಳನ್ನು ತೋರಿಸಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಎರಡು ವರ್ಷ ಮನೆಯಲ್ಲಿಯೇ ಇದ್ದ ಮಕ್ಕಳು ಶಾಲೆಗೆ ಬಂದ ತತ್‌ಕ್ಷಣ ಪಾಠಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂಬುದನ್ನು ಅರಿತಿರುವ ಶಿಕ್ಷಣ ಇಲಾಖೆ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವುದಕ್ಕಾಗಿ ಆರಂಭದ ಎರಡು ವಾರ “ಮಳೆಬಿಲ್ಲು’ ಕಾರ್ಯಕ್ರಮ ರೂಪಿಸಿದೆ.
ಶಾಲೆಗಳಲ್ಲಿ ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಹಾಜರಾತಿ, ದಾಖಲಾತಿ ಇವುಗಳನ್ನು ಪರಿಶೀಲಿಸಲು, ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ, ಮಕ್ಕಳ ದಾಖಲಾತಿ ಪ್ರಗತಿ ಸಹಿತ ಶಾಲಾ ಯೋಜನೆಗಳ ಕುರಿತು ಬಿಇಒ ಹಾಗೂ ಎಸ್‌ಡಿಎಂಸಿಗಳು ಸಭೆ ನಡೆಸುವಂತೆ ಸೂಚಿಸಲಾಗಿದೆ.
ಆರಂಭದ ದಿನವೇ ಶಾಲೆಯಲ್ಲಿ ಶಿಕ್ಷಕರು ಇರುವಂತೆ ಇಲಾಖೆ ನೋಡಿಕೊಂಡಿದೆ. ಇದಕ್ಕಾಗಿ 27 ಸಾವಿರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಉಂಟಾಗಿರುವ ಹಿನ್ನಡೆ ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗಿದೆ.
ಮಕ್ಕಳು ಖುಷಿಯಿಂದ ಶಾಲೆಗೆ ಆಗಮಿಸಿ ಕಲಿಕೆ ಮುಂದುವರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಿಕ್ಷಣ ಸಚಿವ ತಿಳಿಸಿದ್ದಾರೆ.