ಮಂಗಳೂರು: ದೇಶದೆಲ್ಲೆಡೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು-ಕೇರಳ ಸಂಪರ್ಕಿಸುವ ತಲಪಾಡಿ ಗಡಿಯಲ್ಲಿ ಪರಿಶೀಲನೆಯನ್ನು ಮತ್ತೆ ಬಿಗಿಗೊಳಿಸಿದೆ.
ನಿನ್ನೆಯಿಂದ ಕೇರಳ – ಕರ್ನಾಟಕ ರಾಜ್ಯಗಳ ವಿವಿಧ ಗಡಿಗಳ ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆಯನ್ನು ಆರಂಭಿಸಲಾಗಿದ್ದು, ಇಂದಿನಿಂದ (ಬುಧವಾರ) ಕೊರೋನಾ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಆದ್ದರಿಂದ ತಲಪಾಡಿ ಗಡಿಯಲ್ಲಿ ಬೆಳಗ್ಗೆಯಿಂದಲೇ ವಾಹನ ಸಾಲು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಪ್ರವೇಶಿಸುವವರಲ್ಲಿ 72 ಗಂಟೆಗಳ ಮೊದಲು ನಡೆಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಜೊತೆಗಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರ ಭಾಗವಾಗಿ ಗಡಿ ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಇದೇ ವೇಳೆ ಪ್ರಮಾಣಪತ್ರವಿಲ್ಲದೆ ಕಾಸರಗೋಡು ಜಿಲ್ಲೆ ಸಹಿತ ಕೇರಳದಿಂದ ಆಗಮಿಸುವವರಿಗೆ ಕರ್ನಾಟಕ ಸರಕಾರವು ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಉಚಿತ ಕೊರೋನಾ ತಪಾಸಣೆ ಸೌಲಭ್ಯವನ್ನು ವ್ಯವಸ್ಥೆಗೊಳಿಸಿದೆ.