ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಶಾಂತಿ ಭಂಗ ವಾತಾವರಣಕ್ಕೆ ಕಡಿವಾಣ ಹಾಕಲು ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯುಟಿ ಖಾದರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ನಿಯೋಗ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿತು.
ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಡುವ ದುಷ್ಟ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ವಿಟ್ಲದಲ್ಲಿ ಒಂದು ಸಮುದಾಯವನ್ನು ಗುರಿ ಮಾಡಿ ನಿಂದಿಸಿದ ರಾಧಾಕೃಷ್ಣ ಅಡ್ಯಂತಾಯನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮತ್ತು ಮುಂಜಾಗ್ರತಾ ಕ್ರಮವಾಗಿ ದುಷ್ಟ ಶಕ್ತಿಗಳ ನಿಯಂತ್ರಣ, ಪ್ರಚೋದನಕಾರಿ ಭಾಷಣಗಳಿಗೆ ಕುಮ್ಮಕ್ಕು ನೀಡಬಾರದು ಮತ್ತು ಘರ್ಷಣೆ ಉಂಟಾದಲ್ಲಿ ಆಯಾಯ ಸಂಘಟನೆಗಳನ್ನು ಹೊಣೆ ಮಾಡಬೇಕು, ತಪ್ಪಿದಲ್ಲಿ ಅಲ್ಲಿನ ಪೊಲೀಸರನ್ನು ನೇರ ಹೊಣೆ ಮಾಡಬೇಕೆಂಬ ನಿವೇದನೆಯನ್ನು ನೀಡಲಾಯಿತು.
ಇದಕ್ಕೆ ಸ್ಪಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಶಾಲಾ ಕಾಲೇಜು ಸೇರಿದ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಅನಗತ್ಯ ತೊಂದರೆ ಮಾಡಿಕೊಳ್ಳದೆ, ಕಾನೂನು ಪ್ರಭಾರಿಗಳು ಕಾರ್ಯ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಮತ್ತು ಸಮಾಜದಲ್ಲಿ ಸೂಕ್ತ ಅರಿವು ಮೂಡಿಸಬೇಕು ಎಂದು ನಿಯೋಗದವರಲ್ಲಿ ಗೃಹ ಸಚಿವರು ನಿವೇದನೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷ ಹಾಜಿ ಮೋನು ಕನಚೂರು, ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೊಡಿಜಾಲ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆಕೆ, ಕೋಶಾಧಿಕಾರಿ ಮಹಮ್ಮದ್ ಬಪ್ಪಲಿಗೆ, ಯೂಸುಫ್ ಕೊಡಿ, ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.