Connect with us

LATEST NEWS

2G-ಮುಕ್ತ, 5G-ಯುಕ್ತ ಭಾರತವಾಗಿಸಲು ಜಿಯೊ ಪ್ರಯತ್ನ: ಮುಖೇಶ್ ಅಂಬಾನಿ

Published

on

ಮುಂಬೈ :  ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 540,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ.

ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 34.8ರಷ್ಟು ಹೆಚ್ಚಾಗಿದೆ.

ಸೌದಿ ಅರಾಮ್‌ಕೋ ಹಾಗೂ ಪಬ್ಲಿಕ್ ಇನ್‌ವೆಸ್ಟ್‌ಮೆಂಟ್ ಫಂಡ್‌ನ ಮುಖ್ಯಸ್ಥ ಯಾಸಿರ್ ಅಲ್-ರುಮಯ್ಯನ್, ಸ್ವತಂತ್ರ ನಿರ್ದೇಶಕರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಮಂಡಲಿಯನ್ನು ಸೇರಲಿದ್ದಾರೆ ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಮಂಡಲಿಗೆ ಅವರ ಸೇರ್ಪಡೆ, ರಿಲಯನ್ಸ್‌ನ ಅಂತಾರಾಷ್ಟ್ರೀಕರಣದ ಪ್ರಾರಂಭದ ದ್ಯೋತಕವೂ ಆಗಿದೆ ಎಂದು ಅವರು ಹೇಳಿದ್ದಾರೆ.

ಗಣೇಶ ಚತುರ್ಥಿಗೆ ‘ಜಿಯೋಫೋನ್ ನೆಕ್ಸ್ಟ್’

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು ‘2G-ಮುಕ್ತ’ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್‌ಫೋನಿನಲ್ಲಿ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್‌ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, “ಈ ಸ್ಮಾರ್ಟ್‌ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ” ಎಂದು ಹೇಳಿದ್ದಾರೆ.

2G-ಮುಕ್ತ, 5G-ಯುಕ್ತ ಭಾರತದತ್ತ

ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5G ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ ‘2G-ಮುಕ್ತ’ವಾಗುವುದರ ಜೊತೆಗೆ ‘5G-ಯುಕ್ತ’ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್‌ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್‌ ಅನ್ನು ವ್ಯಾಪಕವಾಗಿ ಬಳಸಲಿದೆ.

ಗೂಗಲ್ ಮಾತ್ರವೇ ಅಲ್ಲದೆ ಫೇಸ್‌ಬುಕ್ ಹಾಗೂ ಮೈಕ್ರೋಸಾಫ್ಟ್‌ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರೆದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸ್‌ಆಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸ್‌ಆಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-ಅಜ಼್ಯೂರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪರಿಸರ ಸ್ನೇಹಿ ಯೋಜನೆಗಳಿಗಾಗಿ ನಾಲ್ಕು ಬೃಹತ್ ಕಾರ್ಖಾನೆ:

2035ರ ವೇಳೆಗೆ ನಿವ್ವಳ ‘ಕಾರ್ಬನ್ ಜ಼ೀರೋ’ ಸಾಧನೆ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದೆ. ರಿಲಯನ್ಸ್‌ನ ಈಗಿನ ವಹಿವಾಟಿನ ಆರಂಭಿಕ ಕೇಂದ್ರವಾಗಿದ್ದ ಜಾಮನಗರದಲ್ಲಿ 5,000 ಎಕರೆ ವಿಸ್ತೀರ್ಣದ ‘ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್’ ಅನ್ನು ಪ್ರಾರಂಭಿಸುವ ಮೂಲಕ ಅದನ್ನು ತಮ್ಮ ಹೊಸ ವಹಿವಾಟಿನ ಕೇಂದ್ರವನ್ನಾಗಿಯೂ ಮಾಡಿಕೊಳ್ಳುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಸೌರಶಕ್ತಿಯ ಉತ್ಪಾದನೆ ಮತ್ತು ಶೇಖರಣೆ ಹಾಗೂ ಪರಿಸರ ಸ್ನೇಹಿ ಹೈಡ್ರೋಜನ್ ಉತ್ಪಾದನೆ ಮತ್ತು ಇಂಧನ ರೂಪಕ್ಕೆ ಪರಿವರ್ತನೆಗಾಗಿ ಒಟ್ಟು ನಾಲ್ಕು ಬೃಹತ್ ಕಾರ್ಖಾನೆಗಳನ್ನು ರಿಲಯನ್ಸ್ ಸ್ಥಾಪಿಸಲಿದೆ. ಈ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡಲಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 2030ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್‌ನಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ರಿಲಯನ್ಸ್ ಸಾಧ್ಯವಾಗಿಸಲಿದೆ ಎಂದು ಅವರು ಹೇಳಿದ್ದಾರೆ.

ಹೊಸ ಮಟೀರಿಯಲ್‌ಗಳು ಹಾಗೂ ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉತ್ಪಾದಿಸುವ ನಿಟ್ಟಿನಲ್ಲೂ ರಿಲಯನ್ಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಅಂಗವಾಗಿ ಭಾರತದ ಮೊತ್ತಮೊದಲ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಮ್ಮ ಹೊಸ ಯೋಜನೆಗಳ ಮೂಲಕ ರಿಲಯನ್ಸ್‌ನ ಸಾಂಪ್ರದಾಯಿಕ ಇಂಧನಗಳ ವಹಿವಾಟನ್ನು ತಾಳಿಕೆಯ, ಸರ್ಕ್ಯುಲರ್ ಮತ್ತು ನಿವ್ವಳ ಜ಼ೀರೋ ಕಾರ್ಬನ್ ಮಟೀರಿಯಲ್‌ಗಳ ವಹಿವಾಟಾಗಿ ಬದಲಿಸುವುದಾಗಿ ಅವರು ತಿಳಿಸಿದ್ದಾರೆ. ಇದು ನಮಗೆ ಕೇವಲ ಹೊಸದೊಂದು ವಹಿವಾಟು ಮಾತ್ರವೇ ಅಲ್ಲ, ಇದು ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗುಣಪಡಿಸುವ ತಮ್ಮ ಉದ್ದಿಷ್ಟಕಾರ್ಯ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಮುಂದುವರಿದ ರಿಲಯನ್ಸ್ ರೀಟೇಲ್ ಸಾಧನೆ :

ಕಳೆದ ವರ್ಷದಲ್ಲಿ 1,500 ಹೊಸ ಮಳಿಗೆಗಳ ಸೇರ್ಪಡೆಯೊಂದಿಗೆ, ಇದೀಗ ಭಾರತದ ಪ್ರತಿ ಎಂಟು ಗ್ರಾಹಕರಲ್ಲಿ ಒಬ್ಬರು ರಿಲಯನ್ಸ್ ರೀಟೇಲ್‌ನೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ರೀಟೇಲ್‌ ಗಮನಾರ್ಹ ಸಾಧನೆ ತೋರಿದ್ದು, 65,000ಕ್ಕೂ ಹೆಚ್ಚಿನ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜಿಯೋಮಾರ್ಟ್‌ ಸೇವೆಗಳಿಗೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಒಂದೇ ದಿನದಲ್ಲಿ 6.5 ಲಕ್ಷ ಆರ್ಡರುಗಳನ್ನು ದಾಖಲಿಸುವ ಮೂಲಕ ಅದು ದಾಖಲೆ ನಿರ್ಮಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿ ರಿಲಯನ್ಸ್ ಸಹಾಯಹಸ್ತ :

ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಇಡೀ ರಿಲಯನ್ಸ್ ಕುಟುಂಬ ಒಟ್ಟಾಗಿ ನಿಂತು ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಿಲಯನ್ಸ್ ಪ್ರಾರಂಭಿಸಿದ ಐದು ಉದ್ದಿಷ್ಟಕಾರ್ಯಗಳ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಆಕ್ಸಿಜನ್ ತಯಾರಿಕೆ ಹಾಗೂ ಪೂರೈಕೆ, ಕೋವಿಡ್ ಮೂಲಸೌಕರ್ಯ ಸೃಷ್ಟಿ, ಆಹಾರ ವಿತರಣೆ, ಉದ್ಯೋಗಿಗಳ ರಕ್ಷಣೆ ಹಾಗೂ ಲಸಿಕೆ ನೀಡುವ ನಿಟ್ಟಿನಲ್ಲಿ ರಿಲಯನ್ಸ್‌ನ ಸಾಧನೆಗಳನ್ನು ವಿವರಿಸಿದರು. ಎಂದೂ ಮೆಡಿಕಲ್ ದರ್ಜೆಯ ಆಕ್ಸಿಜನ್ ಉತ್ಪಾದನೆ ಮಾಡಿಲ್ಲದಿದ್ದ ರಿಲಯನ್ಸ್ ಸಂಸ್ಥೆ ಇದೀಗ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಆಕ್ಸಿಜನ್ ಪ್ರಮಾಣದ ಶೇ. 11ಕ್ಕೂ ಹೆಚ್ಚಿನ ಪಾಲನ್ನು ತಯಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ 7.5 ಕೋಟಿಗೂ ಹೆಚ್ಚಿನ ಆಹಾರ ಪೊಟ್ಟಣಗಳನ್ನು ವಿತರಿಸಿರುವ ರಿಲಯನ್ಸ್‌ನ ‘ಮಿಶನ್ ಅನ್ನ ಸೇವಾ’ ಕಾರ್ಪೊರೇಟ್ ಪ್ರತಿಷ್ಠಾನವೊಂದು ಕೈಗೊಂಡ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

LATEST NEWS

ಇದು ಭಾರತದಲ್ಲಿರುವ ದೇವಸ್ಥಾನ… ಆದ್ರೆ ಭಾರತ ಸರ್ಕಾರಕ್ಕಿಲ್ಲ ಇದರ ಮೇಲೆ ಹಕ್ಕು…!

Published

on

 

ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗುವ ಭಕ್ತರು ಅಲ್ಲೇ ಪಕ್ಕದಲ್ಲಿ ಗಂಗಾ ನದಿಯ ದಡದಲ್ಲಿರುವ ಪಶುಪತಿನಾಥ ದೇವಸ್ಥಾನಕ್ಕೂ ಭೇಟಿ ನೀಡ್ತಾರೆ. ಲಲಿತ್ ಘಾಟ್‌ನಲ್ಲಿರುವ ಈ ದೇವಸ್ಥಾನ ಭಾರತದಲ್ಲೇ ಇದ್ರೂ ಇದರ ಮೇಲೆ ದೇಶದ ಯಾವ ಕಾನೂನು ಅನ್ವಯ ಆಗೋದಿಲ್ಲ. ಈ ದೇವಸ್ಥಾನದ ವಿಚಾರದಲ್ಲಿ ಭಾರತ ದೇಶದ ಯಾವುದೇ ಪ್ರಾಧಿಕಾರವಾಗಲಿ ಅಧಿಕಾರ ಚಲಾಯಿಸುವಂತೆಯೂ ಇಲ್ಲ. ಈ ದೇವಸ್ಥಾನ ಕಾಶಿಯಿಂದ ಸುಮಾರು 400 ಕಿಲೋ ಮೀಟರ್ ದೂರದ ನೇಪಾಳ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಭಾರತ ದೇಶದಲ್ಲೇ ಈ ದೇವಸ್ಥಾನ ಇದ್ರೂ ದೇವಸ್ಥಾನದ ಒಂದು ಹುಲ್ಲು ಕಡ್ಡಿ ಅಲುಗಾಡಿಸಬೇಕಾದ್ರೂ ನೇಪಾಳದ ಒಪ್ಪಿಗೆ ಪಡೆಯಬೇಕು.

ದೇವಸ್ಥಾನದ ಸಂಪೂರ್ಣ ಅಧಿಕಾರ ನೇಪಾಳದ್ದು

 


ದೇವಸ್ಥಾನದ ನಿರ್ವಹಣೆಯಿಂದ ಹಿಡಿದು, ಪೂಜೆ ಪುನಸ್ಕಾರ, ಅರ್ಚಕರಿಗೆ ನೀಡುವ ಸೌಲಭ್ಯ ಎಲ್ಲವೂ ನೇಪಾಳ ಸರ್ಕಾರವೇ ಭರಿಸುತ್ತದೆ. ಈ ದೇವಸ್ಥಾನವನ್ನು ನೇಪಾಳದ ರಾಜ ರಾಣಾ ಬಹದ್ದೂರ್ ನಿರ್ಮಿಸಿರೋದೇ ಇದಕ್ಕೆ ಕಾರಣ. 1800 -1804 ರ ನಡುವೆ ಕಾಶಿಯಲ್ಲಿ ತಂಗಿದ್ದ ರಾಣಾ ಬಹದ್ದೂರು ಈ ದೇವಾಲಯವನ್ನು ನಿರ್ಮಾಣ ಮಾಡಿದ ಅನ್ನೋ ಐತಿಹಾಸಿಕ ದಾಖಲೆಗಳು ಇದೆ.

1843 ರಲ್ಲಿ ಪೂರ್ಣಗೊಂಡ ನಿರ್ಮಾಣ ಕಾರ್ಯ

ರಾಣಾ ಬಹದ್ದೂರ್ ಸಹಾ ನಾಲ್ಕು ವರ್ಷ ಕಾಶಿಯಲ್ಲಿ ಇದ್ದಾಗ ದೇವಸ್ಥಾನ ನಿರ್ಮಾಣ ಆರಂಭಿಸಿದ್ದರೂ, 1843 ರಲ್ಲಿ ಈ ದೇವಸ್ಥಾನ ಪೂರ್ಣಗೊಂಡಿತ್ತು. ರಾಣಾ ಬಹದ್ದೂರು ಸಹಾ ಅವರ ಮಗ ರಾಜ ರಾಜೇಂದ್ರ ವೀರ್ ಈ ದೇವಾಲಯದ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಕಠ್ಮಂಡುವಿನ ಪಶುಪತಿನಾತ ದೇವಾಲಯದಂತೆಯೇ ಈ ದೇವಸ್ಥಾನವನ್ನು ನಿರ್ಮಾಣಮಾಡಲಾಗಿದೆ. ಈ ದೇವಸ್ಥಾನದ ಸಂಪೂರ್ಣ ನಿರ್ಮಾಣ ಕಾರ್ಯವನ್ನೂ ನೇಪಾಳಿ ಕುಶಲಕರ್ಮಿಗಳೇ ಮಾಡಿದ್ದಾರೆ.

ಇದನ್ನೂ ಓದಿ…ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

ಮರದಿಂದ ಮಾಡಿದ ವಿಶೇಷ ದೇವಾಲಯ

ಈ ದೇವಾಲಯದ ವಿಶೇಷವೆಂದರೆ ಈ ದೇವಾಲಯವು ಕಲ್ಲಿನಿಂದ ಮಾಡಲಾಗಿಲ್ಲ, ಆದರೆ ಮರದಿಂದ ಮಾಡಲ್ಪಟ್ಟಿದೆ ಮತ್ತು ಸುಂದರವಾದ ಕೆತ್ತನೆಗಳನ್ನು ಸಹ ಕೆತ್ತಲಾಗಿದೆ. ಜನರು ಈ ದೇವಾಲಯವನ್ನು ಮಿನಿ ಖಜುರಾಹೋ ಎಂದೂ ಕರೆಯುತ್ತಾರೆ. ಕಾಶಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಭಾರತ ಮತ್ತು ನೇಪಾಳ ನಡುವಿನ ಸ್ನೇಹಕ್ಕೆ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಈ ದೇವಾಲಯದಲ್ಲಿ, ಪೂಜೆ ಸೇರಿದಂತೆ ಎಲ್ಲಾ ಆಚರಣೆಗಳನ್ನು ನೇಪಾಳದ ಜನರು ಮಾತ್ರ ಮಾಡುತ್ತಾರೆ.

Continue Reading

FILM

ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟ ‘ಪಾರು’ ಧಾರಾವಾಹಿ ನಟ ‘ಆದಿ’!

Published

on

ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಧಾರಾವಾಹಿಗಳಲ್ಲಿ ‘ಪಾರು’ ಕೂಡಾ ಒಂದು. ಆದಿ – ಪಾರು ಪ್ರೇಮಕಥೆ, ಅಖಿಲಾಂಡೇಶ್ವರಿ ಎಂಬ ಹಿರಿಮೆ ಎಲ್ಲವೂ ಧಾರಾವಾಹಿಯ ಜೀವಾಳವಾಗಿತ್ತು. ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

ಕಿರುತೆರೆಯಲ್ಲಿ ಸುಮಾರು ಆರು ವರ್ಷಗಳ ಈ ಧಾರಾವಾಹಿ ಪ್ರಸಾರವಾಗಿದೆ. ಈ ಧಾರಾವಾಹಿಯಲ್ಲಿ ಪಾರು ಪಾತ್ರದಿಂದ ಮೋಕ್ಷಿತಾ ಪೈ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಹಾಗೆಯೇ ಆದಿ ಪಾತ್ರದಿಂದ ನಟ ಶರತ್ ಪದ್ಮನಾಭ್ ಕೂಡ ಅಭಿಮಾನಿಗಳನ್ನು ಗಳಿಸಿದ್ದಾರೆ.

ಜೀ ಕನ್ನಡದಲ್ಲಿ ಬರುತ್ತಿದ್ದ ಪಾರು ಸೀರಿಯಲ್ ಈಗ ಅಂತ್ಯ ಕಂಡಿದೆ. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಅಂದರೆ ಶರತ್ ಪದ್ಮನಾಭ್ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬೆಳ್ಳಿಪರದೆ ಮೇಲೆ ‘ಆದಿ’

ಹೌದು, ನಟ ಶರತ್ ಪದ್ಮನಾಭ್ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ಅನಿಮಾ’. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ನಿರ್ದೇಶಕ ವರ್ಧನ್ ಎಂ ಎಚ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿಮಾ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ.

ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಶರತ್ ಪದ್ಮನಾಭ್ ಹಂಚಿಕೊಂಡಿದ್ದಾರೆ.


” ಅನಿಮಾ, ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ!! Presenting you the title poster of our movie !! ಒಂದು ರೋಚಕವಾದ ಕಥೆಯನ್ನು ಹೇಳಲು ಆದಷ್ಟು ಬೇಗ ಬರ್ತಾ ಇದೀವಿ !! ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಅನುಷಾ ಕೃಷ್ಣ ನಾಯಕಿ

ಅನಿಮಾ ಚಿತ್ರದಲ್ಲಿ ಶರತ್ ಪದ್ಮನಾಭ್ ಗೆ ನಾಯಕಿಯಾಗಿ ಅನುಷಾ ಕೃಷ್ಣ ಜೊತೆಯಾಗಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಸಂಗೀತ ಚಿತ್ರಕ್ಕಿದೆ.

Continue Reading

LATEST NEWS

ಆಭರಣ ಪ್ರಿಯರಿಗೆ ನಿರಾಸೆ….ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ…!

Published

on

ಬೆಂಗಳೂರು : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ನಿನ್ನೆಗಿಂತ ಇಂದು(ಮಾ.29)  ಚಿನ್ನದ ದರ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆಯೂ ಕೂಡ ಹೆಚ್ಚಾಗಿದ್ದು, ಶುಭಕಾರ್ಯಗಳಿಗೆ ಚಿನ್ನ ಖರೀದಿಸಬೇಕು ಎಂದುಕೊಂಡವರು ಯೋಚಿಸುವಂತಾಗಿದೆ.

ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

ಎಷ್ಟಿದೆ ಬೆಲೆ ?
ಸದ್ಯ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 61,700 ರೂಪಾಯಿ ಇದ್ದು, 24 ಕ್ಯಾರೆಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 67,310 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,750 ರೂಪಾಯಿ ಇದೆ.

ಒಂದು ಗ್ರಾಂ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ – 6,170 ರೂಪಾಯಿ
24 ಕ್ಯಾರೆಟ್ ಚಿನ್ನದ ದರ – 6,731 ರೂಪಾಯಿ

10 ಗ್ರಾಂ ಚಿನ್ನದ ದರ

22 ಕ್ಯಾರೆಟ್ ಆಭರಣ ಚಿನ್ನದ ದರ – 61,700 ರೂಪಾಯಿ
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 67,310 ರೂಪಾಯಿ

8 ಗ್ರಾಂ ಚಿನ್ನದ ದರ
22 ಕ್ಯಾರೆಟ್ ಆಭರಣ ಚಿನ್ನದ ದರ – 49,360 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು- 61,700 ರೂಪಾಯಿ
ಚೆನ್ನೈ – 62,500 ರೂಪಾಯಿ
ಮುಂಬೈ – 61,700 ರೂಪಾಯಿ
ಕೇರಳ -61,700 ರೂಪಾಯಿ
ಕೋಲ್ಕತ್ತಾ – 61,700 ರೂಪಾಯಿ
ಜೈಪುರ್ -61,850 ರೂಪಾಯಿ
ಭುವನೇಶ್ವರ್- 61,700 ರೂಪಾಯಿ
ಅಹ್ಮದಾಬಾದ್- 61,750 ರೂಪಾಯಿ
ಲಕ್ನೋ – 61,850 ರೂಪಾಯಿ
ನವದೆಹಲಿ – 61,850 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು-7,750 ರೂಪಾಯಿ
ಚೆನ್ನೈ- 8,050 ರೂಪಾಯಿ
ಮುಂಬೈ-7,750 ರೂಪಾಯಿ
ಕೋಲ್ಕತ್ತಾ-7,750 ರೂಪಾಯಿ
ನವದೆಹಲಿ-7,750 ರೂಪಾಯಿ

Continue Reading

LATEST NEWS

Trending