ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಂತರ ವ್ಯಾಪಾರ ನಿಷೇಧ, ಹಲಾಲ್-ಜಟ್ಕಾ ಕಟ್ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ಮಸೀದಿ, ಚರ್ಚ್, ದೇವಸ್ಥಾನದ ಮೇಲಿನ ಮೈಕ್‌ಗಳ ಶಬ್ದ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿ, ಆರು ತಿಂಗಳ ಹಿಂದೆ ಶ್ರೀರಾಮ ಸೇನೆ ಬೆಳಿಗ್ಗೆ 5ಕ್ಕೆ ಲೌಡ್ ಸ್ಪೀಕರ್ ಹಾಕುವುದನ್ನು ತಡೆಯಲು ಎಲ್ಲಾ ತಹಶೀಲ್ದಾರ್, ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದೆವು.
ಆದರೆ ಎಲ್ಲಿಯೂ ತಹಶೀಲ್ದಾರ್ ಕ್ರಮ ಕೈಗೊಳ್ಳಲಿಲ್ಲ. ಕೋರ್ಟ್ ಆದೇಶ ಪಾಲಿಸಲು ಮುಸ್ಲಿಂ ಸಮಾಜಕ್ಕೆ ಸರ್ಕಾರ ಹೇಳಬೇಕು. ಅವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಆದರೆ ಧ್ವನಿವರ್ಧಕ ಬಳಕೆಗೆ ವಿರೋಧ ಇದೆ.
ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಕೋರ್ಟ್ ಆದೇಶವಿದ್ದರೂ ಪಾಲಿಸುತ್ತಿಲ್ಲ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ.
ಇಲ್ಲದಿದ್ದರೆ ನಾಳೆಯಿಂದ ದೇವಸ್ಥಾನಗಳಲ್ಲಿ ಪ್ರತಿದಿನ 5 ಗಂಟೆಗೆ ರಾಮ ಭಜನೆ, ಶಿವನಾಮ, ಓಂಕಾರಗಳನ್ನೂ ಹಾಕುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.