ಪುತ್ತೂರು: ಮಾಣಿ– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಉರ್ಲಾಂಡಿ ಬೈಪಾಸ್ ಬಳಿ ಕಾರು ಚಾಲಕನ ಅಜಾಗರೂಕತೆಯಿಂದ ನಾಲ್ಕು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ, ನಾಲ್ವರು ಗಾಯಗೊಂಡಿದ್ದಾರೆ.
ಉಪ್ಪಿನಂಗಡಿ ಕಡೆಯಿಂದ ಬಂದ ಮಾರುತಿ ಸ್ವಿಫ್ಟ್ ಕಾರೊಂದು ಬೈಪಾಸ್ ರಸ್ತೆ ಪ್ರವೇಶಿಸಿ ಮುಂದಿನಿಂದ ಹೋಗುತ್ತಿದ್ದ ಆಟೊ ರಿಕ್ಷಾಕ್ಕೆ ಡಿಕ್ಕಿಯಾಗಿ ಬಳಿಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಮತ್ತು ಕಾರೊಂದಕ್ಕೆ ಡಿಕ್ಕಿ ಹೊಡೆದು ರಸ್ತೆ ಬಿಟ್ಟು ಗುಡ್ಡೆ ಹತ್ತಿದೆ. ಘಟನೆಯಲ್ಲಿ ಸ್ಕೂಟರ್ ಸವಾರರಾದ, ನಿತ್ಯ ಠೇವಣಿ ಸಂಗ್ರಾಹಕಿ ಬಬಿತಾ ಮತ್ತು ಆಟೊ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಗಾಯವಾಗಿದೆ. ಅಪಘಾತದಿಂದಾಗಿ ಸ್ಕೂಟರ್, ಆಟೊ ರಿಕ್ಷಾ ಹಾಗೂ ಎರಡೂ ಕಾರುಗಳಿಗೆ ಹಾನಿಯಾಗಿದೆ. ಕಾರು ಚಾಲಕ ಉಡುಪಿಯ ಪ್ರದೀಪ್ ಶೆಟ್ಟಿ ಎಂಬುವರು ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿಕೊಂಡು ಬಂದಿರುವುದೇ ಈ ಸರಣಿ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಪುತ್ತೂರು ಸಂಚಾರ ಠಾಣೆಯ ಎಸ್‌ಐ ರಾಮ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಿಕ್ಷಾ ಚಾಲಕ ಸುಧಾಕರ್ ಎಂಬುವರು ನೀಡಿದ ದೂರಿನಂತೆ ಕಾರು ಚಾಲಕ ಪ್ರದೀಪ್ ಶೆಟ್ಟಿ ವಿರುದ್ಧ ‘ಡ್ರಿಂಕ್ ಆಂಡ್ ಡ್ರೈವ್’ ಪ್ರಕರಣ ದಾಖಲಾಗಿದೆ.