ಮಂಗಳೂರು: ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿಯ ಪ್ರಾಧ್ಯಾಪಕ ಜಯಶಂಕರ್ ಅವರಿಗೆ ೧೭.೫೦ ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಹುದ್ದೆಯನ್ನು ಕೊಡಿಸದೇ ಹಣವನ್ನೂ ಮರಳಿಸದೇ ಜೀವ ಬೆದರಿಕೆ ಹಾಕಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿದೆ.ನನ್ನನ್ನು ವಿನಾ ಕಾರಣ ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಒಬ್ಬ ಸರಕಾರಿ ಪ್ರಾಧ್ಯಾಪಕ ಕುಲಪತಿ ಹುದ್ದೆಗೆ ಲಂಚ ಕೊಡುವುದೆಂದರೆ ಅವರು ಕೂಡಾ ಅಪರಾಧ ಎಸಗಿದಂತೆ ಆಗಿದೆ.
ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಸಾದ್ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಮಂಗಳೂರಿನ ೭ನೇ ಜೆ ಎಂ ಎಫ್‌ಸಿ ನ್ಯಾಯಾಲಯ ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದೆ.
ತನಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರ ಪರಿಚಯವಿದೆ. ಅವರ ಪ್ರಭಾವವನ್ನು ಬಳಸಿಕೊಂಡು ತಾನು ಹುದ್ದೆ ಕೊಡಿಸುವುದಾಗಿ ಹೇಳಿ ಪ್ರಸಾದ್ ಅತ್ತಾವರ ವಂಚನೆ ಎಸಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಅಲ್ಲದೆ ಪ್ರಸಾದ್ ಅತ್ತಾವರ್ ವಿವಿಧ ರಾಜಕೀಯ ಗಣ್ಯರೊಂದಿಗೆ ಇರುವ ಭಾವಚಿತ್ರವನ್ನು ಕೂಡಾ ಸಾಮಾಜಿಕ ತಾಲ ತಾಣದಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ್‌ನನ್ನು ಬಂಧಿಸಲಾಗಿತ್ತು. ಇದೀಗ ಪ್ರಸಾದ್ ಅತ್ತಾವರ್‌ಗೆ ಮಂಗಳೂರಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.