ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮಾಡಿದ್ದು, ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಸಲೀಂ ಎಂಬಾತ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದಾನೆಂಬ ಮಾಹಿತಿ ಸಿಕ್ಕ ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಸಲೀಂ ಎಂಬಾತ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಪ್ರಕಾಶ್ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಈ ಹಿಂದೆ ಸಲೀಂ, ಅಲಿ ಎಂಬವರನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಗೋವಿಂದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಂಧನದ ವೇಳೆ ಆರೋಪಿ ಸಲೀಂ, ಪೊಲೀಸರಿಗೆ ತಿರುಗಿ ಬಿದ್ದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಪೇದೆಯೊಬ್ಬರಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಅಲ್ಲೇ ಕುಸಿದು ಬಿದ್ದ ಸಲೀಂ ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಬಳಿಕ ಆತನನ್ನು ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.