ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ರಾಜಲಕ್ಷ್ಮಿ ಸಭಾಭವನದ ಎದುರು ಇಂದು ಮುಂಜಾನೆ ನಡೆದಿದೆ.
ಮಹಾರಾಷ್ಟ್ರ ಸಾಂಗ್ಲಿಯದ ದಿನೇಶ್ ಚಂದ್ರಶೇಖರ ಮುಂಚಾಂಡಿ (20) ಎಂದು ಗುರುತಿಸಲಾಗಿದೆ.
ಬಿಜಾಪುರದಿಂದ ಮಂಗಳೂರು ಎಪಿಎಂಸಿಗೆ ತರಕಾರಿ ಸಾಗಾಟ ಮಾಡುತಿದ್ದ ಪಿಕಪ್ ವಾಹನ ಕೋಟ ಮಣೂರು ಸಮೀಪ ರಸ್ತೆಯ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಪಲ್ಟಿಯಾದ ಪರಿಣಾಮ ಕ್ಲೀನರ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೋಟ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ರಸ್ತೆಯಲ್ಲಿ ನಿನ್ನೆ ಅನಿಲ ತುಂಬಿದ ಟ್ಯಾಂಕರ್ ಸಹ ಪಲ್ಟಿಯಾಗಿತ್ತು.