ಮಂಗಳೂರು : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಮಂಗಳೂರಿಗೆ ಆಗಮಿಸಿ ಹೆದ್ದಾರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಗರದ ಕುಲಶೇಖರ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಂತೆ 7 ಜಿಲ್ಲೆಗಳ ವ್ಯಾಪ್ತಿಗೆ ಬರುವ 3,163 ಕೋಟಿ ರೂಪಾಯಿಗಳ ವೆಚ್ಚದ 164 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ 15 ಯೋಜನೆಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು ಕಾರ್ಯಕ್ರಮ ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆ ಅಭಿವೃದ್ದಿಯ ಬಗ್ಗೆ ಆನೇಕ ಪ್ರಸ್ತಾಪಗಳನ್ನು ಮಾಡಿದ್ದಾರೆ, ಅದಕ್ಕೆ ಕೇಂದ್ರ ಸರ್ಕಾರ ಬದ್ದವಾಗಿದೆ.
ಮಂಗಳೂರಿಗೆ ರಿಂಗ್ ರೋಡ್ ಮಾಡಲು ಡಿಪಿಆರ್ ಗೆ ಈಗಾಗಾಗಲೇ ಸೂಚನೆ ನೀಡಿದ್ದೇನೆ, ಮುಂಬೈಯಿಂದ ಕನ್ಯಕುಮಾರಿಗೆ ಮಂಗಳೂರಾಗಿ ಎಕ್ಸ್ ಪ್ರೆಸ್ ಹೈವೇ ನಿರ್ಮಾಣವಾಗಲಿದೆ, ಈ ಮೂಲಕ ಸಮಗ್ರ ಕರ್ನಾಟಕವನ್ನು ಅಭಿವೃದ್ದಿ ಮಾಡಲು ಸಂಕಲ್ಪಮಾಡಿದ್ದೇವೆ.
ಶಿರಾಡಿ ಘಾಟ್ ಕಾಮಗಾರಿ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. 4 ಲೈನ್ ರಸ್ತೆ ನಿರ್ಮಾಣ ಮಾಡಲು ಕಾರ್ಯಯೋಜನೆ ಜಾರಿಗೊಳಿಸಲಾಗಿದೆ.
ಇದರ ಜೊತೆಗೆ ಶೀಘ್ರದಲ್ಲೇ 14 ಸಾವಿರ ಕೋಟಿ ವೆಚ್ಚದಲ್ಲಿ ಜೊತೆಗೆ 26 ಕಿ. ಮೀ ಸುರಂಗ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಮಾಡಿ ಸೂಚನೆ ನೀಡಲಾಗುವುದು ಎಂದ ಅವರು ಹಣಕಾಸಿನ ಯಾವುದೇ ಅಡಚಣೆ ಸರ್ಕಾರಕ್ಕೆ ಇಲ್ಲ.
ಮುಂದಿನ 5 ವರ್ಷಗಳ ರಸ್ತೆಗಳ ವಿಷಯದಲ್ಲಿ ಭಾರತವನ್ನು ವಿಶ್ವಕ್ಕೆ ಮಾದರಿ ಮಾಡಲಾಗುವುದು ಎಂದರು.
ಮಂಗಳೂರು ನಗರದ ನಂತೂರು ಫ್ಲೈ ಓವರ್‌ಗೆ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ ಸಚಿವರು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾಪಿಸಿದ ಸುರತ್ಕಲ್ ಟೋಲ್ ವಿಲೀನ ಮಾಡುವ ಬಗ್ಗೆ ಶೀಘ್ರದಲ್ಲೇ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಕರೆಸಿ ಅದಕ್ಕೆ ಶಾಶ್ವತ ಪರಿಹಾರ ನೀಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಭಿವೃದ್ದಿಯ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ.
ರಸ್ತೆಗಳು ಆರ್ಥಿಕ , ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ತರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ನೀರು ಹರಿದು ಹೋಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಾಣ ಮಾಡಿ ನೀರನ್ನು ಹಿಡಿದಿಟ್ಟು ಅಂತರ್ಜಲ ಏರಿಕೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡುವ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ.
ಮಂಗಳೂರು ನಗರ ಸೇರಿದಂತೆ ಪ್ರಮುಖ ನಗರಗಳ ಬೈ ಪಾಸ್ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು. ಕರಾವಳಿಯ ಜನರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು.
ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆನೇಕ ಯೋಜನೆಗಳನ್ನು ಘೋಷಣೆ ಮಾಡಿ ಅದನ್ನು ಕಾರ್ಯ ರೂಪಕ್ಕೆ ತಂದ ಸಚಿವ ನಿತ್ ಗಡ್ಕರಿ ಅವರಿಗೆ ಅಭಿನಂದಿಸಿದ ಕಟೀಲ್ ನಂತೂರು ಫ್ಲೈ ಓವರ್, ವೇಗವಾಗಿ ಬೆಳೆಯುತ್ತಿರುವ ಮಂಗಳೂರಿಗೆ ರಿಂಗ್ ರೋಡ್, ಮತ್ತು ಭಾರಿ ಹೋರಾಟ ವಿವಾದಗಳನ್ನು ಸೃಷ್ಟಿಸಿದ ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನ ಮಾಡಿ ಮಂಗಳೂರಿನ ಜನರಿಗೆ ಮುಕ್ತಿ ಕೊಡಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್, ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾಂದ ಶೆಟ್ಟಿ, ಉಪಮೇಯರ್ ಸುಮಂಗಲ. ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯಿಲಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಯಾವುದೆಲ್ಲ ಯೋಜನೆಗಳು…?
ರಾಷ್ಟ್ರೀಯ ಹೆದ್ದಾರಿ 66ರ ಎನ್‌ಎಂಪಿಟಿ ಸಂಪರ್ಕಿಸುವ ಕೆಪಿಟಿ ಜಂಕ್ಷನ್‌ನಲ್ಲಿ 34.61 ಕೋ.ರೂ. ವೆಚ್ಚದಲ್ಲಿ ವಿಯುಪಿ ನಿರ್ಮಾಣ, ರಾ.ಹೆ. 75ರ ಬೆಂಗಳೂರು -ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ ವರೆಗೆ 442.87 ಕೋ.ರೂ. ವೆಚ್ಚದ 15.13 ಕಿ.ಮೀ. ದೂರದ ನಾಲ್ಕು ಪಥ ರಸ್ತೆ ನಿರ್ಮಾಣ, ಗುಂಡ್ಯ ಅಡ್ಡಹೊಳೆಯಿಂದ ಪೆರಿಯಶಾಂತಿ -ಬಂಟ್ವಾಳಕ್ಕೆ 48.48 ಕಿ.ಮೀ. ದೂರಕ್ಕೆ 1,480.85 ಕೋ. ರೂ. ವೆಚ್ಚದ ಚತುಷ್ಪಥ ನಿರ್ಮಾಣ ಮತ್ತು ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ಕಾಮಗಾರಿ, ರಾ.ಹೆ. 169ರ ಬಿಕರ್ನಕಟ್ಟೆ-ಸಾಣೂರು ನಡುವೆ 45.01 ಕಿ.ಮೀ. ದೂರದ 1,137 ಕೋ.ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ರಾ.ಹೆ.73ರ ಮಂಗಳೂರು ತುಮಕೂರು ಭಾಗದ ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ವರೆಗೆ ಪೇವ್ ಶೋಲ್ಡರ್ ನೊಂದಿಗೆ ದ್ವಿಪಥವಾಗಿ ರಸ್ತೆಯನ್ನು 696.26 ಕೋರೂ.ಗಳಲ್ಲಿ 35 ಕಿ.ಮೀ. ವರೆಗೆ ಅಭಿವೃದ್ಧಿ,. ರಾ.ಹೆ. 275ರ 16.35 ಕಿ.ಮೀ, 17.80 ಕಿ.ಮೀ., 20.60 ಕಿ.ಮೀ., 23 ಕಿ.ಮೀ., 24.90 ಕಿ.ಮೀ., 27.36 ಕಿ.ಮೀ, 46.27 ಕಿ.ಮೀ ಮತ್ತು 66.64 ಕಿ.ಮೀ.ಗಳಲ್ಲಿ ಒಟ್ಟು 48.96 ಕೋ.ರೂ.ಗಳಲ್ಲಿ 8 ಕಿರು ಸೇತುವೆಗಳ ನಿರ್ಮಾಣ. ರಾ.ಹೆ. 234ರ ಬಿ.ಸಿ.ರೋಡ್- ಪುಂಜಾಲಕಟ್ಟೆ ಭಾಗದ 20.15 ಕಿ.ಮೀ.ನಿಂದ 40 ಕಿ.ಮೀ. ವರೆಗೆ 19.85 ಕಿ.ಮೀ. ದೂರದ ದ್ವಿಪಥ ರಸ್ತೆ 159.70 ಕೋ.ರೂ. ವೆಚ್ಚದಲ್ಲಿ ನಿರ್ಮಾಣ