Connect with us

  DAKSHINA KANNADA

  ಹರುಷದ ಹೊನಲಿಗೆ ಯುಗಾದಿಯ ಬೇವು-ಬೆಲ್ಲ…

  Published

  on

  ಪ್ರಕೃತಿಯ ಸಿರಿಮುಡಿಗೆ ಕಳೆ ಕಟ್ಟಿದೆ. ಹಸುರಿತ್ತಲ್, ಹಸುರತ್ತಲ್ ಎಂಬ ಭಾವ ಮೈ ಮನಗಳಲ್ಲಿ ಹಚ್ಚಹಸಿರಾಗಿದೆ. ನವೋಲ್ಲಾಸ, ನವ ಚೈತನ್ಯ ತುಂಬಿಕೊಂಡಿದೆ.ಇದಕ್ಕೆಲ್ಲಾ ಕಾರಣ ಹಬ್ಬಗಳ ರಾಜ ಯುಗಾದಿಯ ಆಗಮನ.

  ಎತ್ತನೋಡಿದರತ್ತ ಮಾವು ಬೇವುಗಳು ಹಚ್ಚ ಹಸಿರನ್ನು ಹೊತ್ತು ಸ್ವಾಗತ ಕೂರುತಿವೆ. ನವ ವಸಂತನ ಆಗಮನಕ್ಕೆ ದುಂಬಿಯು ಝೇಂಕಾರಗೈಯುತಿದೆ. ಪ್ರಕೃತಿಯೇ ತೋರಣ ಕಟ್ಟಿ ಸಜ್ಜಾಗಿ ನಿಂತಿದೆ… ಇದುವೇ ವಸಂತ ಋತುವಿನಲ್ಲಿ ಹೊಸತನ್ನು ತರುವ ಸಂಭ್ರಮದ ಹಬ್ಬ.. ಹೊಸ ವರುಷ.. ಅದುವೇ “ಸಂಭ್ರಮದ ಯುಗಾದಿ” ಹೊಸ ಯುಗದ ಆರಂಭವಾಗುವುದೇ ಯುಗಾದಿ ಹಬ್ಬದಿಂದ.. ಇದು ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ.. ಪ್ರಕೃತಿಯ ಮಡಿಲಲ್ಲಿ ಮೂಡುವ ಹೊಸ ಚಿಗುರು ಮನುಷ್ಯರಲ್ಲಿ ಹೊಸ ಹುರುಪನ್ನು ತರಿಸುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಹರಿ ಧ್ಯಾನವನ್ನು ಮಾಡಿ,  ಬೇವು-ಬೆಲ್ಲ ತಿಂದು ಯುಗಾದಿ ಹಬ್ಬವನ್ನು ಆರಂಭಿಸುತ್ತಾರೆ.

  ಸಿಹಿ-ಕಹಿಯ ಸಮ್ಮಿಲನದ ಹಬ್ಬ:

  ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ’ ಅನ್ನೋ ದ.ರಾ.ಬೇಂದ್ರೆಯವರ ಹಾಡಿನ ಸಾಲಿನಂತೆ ಪ್ರತೀ ವರ್ಷದಂತೆ ಮತ್ತೆ ಸಿಹಿ-ಕಹಿ ಸಮ್ಮಿಲನದ ಯುಗಾದಿ ಹಬ್ಬ ಮತ್ತೆ ಬಂದಿದೆ. ವಸಂತ ಋತುವಿನ ಚೆಲುವು, ಮೋಹಕತೆಗೆ ಜನತೆ ಪುಳಕಿತರಾಗಿದ್ದಾರೆ. ಇದರ ನಡುವೆ ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ..ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ.  ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸ್ತಾರೆ. ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗೋದ್ರಿಂದ ತಂಪಾದ ವಾತಾವರಣದ ಜೊತೆಗೆ ಎಲೆ ಹಸಿರು ಮೂಡುವ ಕ್ಷಣ.  ಚಿಗುರಿದ ಎಲೆಗಳು ಹಚ್ಚ ಹಸಿರು ಸೀರೆಯುಟ್ಟು ಮದುವಣಗಿತ್ತಿಯಂತೆ ಕಂಗೊಳಿಸುವ ಪ್ರಕೃತಿ.., ತೂಗಾಡುವ ಬಣ್ಣ ಬಣ್ಣದ ಹೂಗಳಿಂದ ತುಂಬಿ ತುಳುಕುವ ಉದ್ಯಾನ, ತೋಟಗಳು, ಸುಗಂಧಭರಿತ ಆಹ್ಲಾದಕರ ಗಾಳಿ, ಕಂಪು ಬೀರುವ ಹೂವಿನ ಮಕರಂದಕ್ಕೆ ಮುತ್ತಿಡೋ ದುಂಬಿಗಳು, ಚಿಟ್ಟೆಗಳ ನರ್ತನ, ಹೂದೋಟದ ತುಂಬ ಕಲರವದಲ್ಲಿ ತಲ್ಲೀನವಾಗಿರುವ ಅದೆಲ್ಲಿಂದಲೋ ವಲಸೆ ಬಂದ ಬಣ್ಣ ಬಣ್ಣದ ಹಕ್ಕಿಗಳು… ಇವೆಲ್ಲವುಗಳ ಜೊತೆ ಮೈಮನದಲ್ಲಿ ನವೋಲ್ಲಾಸ, ನವ ಚೈತನ್ಯದ ಸಂಚಲನ ಮೂಡಿಸಿ ಕಚಗುಳಿಯ ಅನುಭವವಾಗುತ್ತಿದ್ದರೆ ಅದುವೇ ನೂತನ ವರ್ಷಾದ ಆರಂಭ …

  ಅದೃಷ್ಟ ಹೊತ್ತು ತರುವ  ನವ ಯುಗಾದಿ

  ಯುಗದ ಆದಿ ಎಂದು ಕರೆಯುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಣೆ ಮಾಡ್ತಾರೆ. ಯುಗ ಎಂದರೆ ಹೊಸ, ಆದಿ ಎಂದರೆ ಆರಂಭ. ಒಂದು ಹೊಸ ಪರ್ವದ ಆರಂಭ ಅಂತಾನೂ ಈ ಹಬ್ಬವನ್ನು ಕರೀತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಸೌರಮಾನ ಯುಗಾದಿ ಆಚರಣೆ ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು.. ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದ್ರೆ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸ್ತಾರೆ. ಯುಗಾದಿ ಹಬ್ಬ ನಮ್ಮೆಲ್ಲರಿಗೂ ಅದೃಷ್ಟದ ಹಬ್ಬ.. ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ ಎನ್ನುವ ನಂಬಿಕೆಯಿದೆ. ಯುಗಾದಿ ಹಬ್ಬವನ್ನು ಮಂಗಳಕರವೆಂದೂ ಹೇಳ್ತಾರೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯ ದಿನದಂದು ನೂತನ ಅಂಗಡಿಗಳ ಶುಭಾರಂಭ, ಕಟ್ಟಡ ನಿರ್ಮಾಣದ ಕೆಲಸ ಕಾರ್ಯಗಳನ್ನು ಆರಂಭ ಮಾಡ್ತಾರೆ.

  ಐತಿಹಾಸಿಕ ಪುರಾಣವೇನು..?

  ಹಿಂದೂ ಪುರಾಣಗಳ ಪ್ರಕಾರ, ಇಂದು ಬ್ರಹ್ಮ ದೇವ ಬ್ರಹ್ಮಾಂಡವನ್ನು ಸೃಷ್ಠಿಸಿರುವುದರಿಂದ ಈ ದಿನವನ್ನು ಹೊಸತನದ ಯುಗಾದಿ ಹಬ್ಬ ಎಂದು ಆಚರಣೆ ಮಾಡಲಾಗ್ತಿದೆ ಅಂತೆ.. ವೇದಗಳ, ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬ ಹಲವು ಮಹತ್ತರಗಳಿಗೆ ಸಾಕ್ಷಿ ಕೂಡ ಹೌದು.

  ಯುಗಾದಿ ಹಬ್ಬ ನಮ್ಮೆಲ್ಲರಿಗೂ ಹೊಸ ವರ್ಷದ ಆರಂಭ. ಇದಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ… ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಶಬ್ದಗಳಿಂದ ಯುಗಾದಿ ಎಂಬುದು ಆರಂಭಗೊಂಡಿದೆ. ಚೈತ್ರಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿ ಮಾಡ್ತಾನೆ, ಅಂದೇ ಸತ್ಯ ಯುಗವೂ ಆರಂಭವಾಯಿತು. ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕದ ದಿನವೆಂದೂ ಪುರಾಣವಿದೆ. ರವಿಯ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ಪ್ರತೀತಿ ಇದೆ. ಹಾಗೆನೆ ರಾಮನು ವಾಲಿಯನ್ನು ವಧಿಸಿದ ದಿನವೆಂದೂ, ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂದೂ ಹೇಳುತ್ತದೆ ಪುರಾಣ. ಅಂದೇ ಶಾಲಿವಾಹನ ಶಕೆ ಆರಂಭಗೊಂಡಿತೆಂಬ ಒಂದು ಕತೆಯೂ ಇದೆ. ಇಂತಹ ಹಲವು ಶುಭ ಘಟನೆಗಳು ಸಂಭವಿಸಿದ ದಿನದಂದು ಚಂದ್ರಮಾನ ‘ಯುಗಾದಿ’ ಆಚರಣೆಗೆ ಬಂದಿದೆ.

  ಹಿಂದೂಗಳಿಗೆ ವರ್ಷದಲ್ಲಿ ಬರುವ ಮೂರುವರೆ ದಿನಗಳು ಬಹಳ ಮುಖ್ಯವಾದ ದಿನವಿದೆ. ಅದು ಯುಗಾದಿ, ದೀಪಾವಳಿ, ವಿಜಯದಶಮಿ, ಮತ್ತು ಅಕ್ಷಯ ತದಿಗೆಯ ಅರ್ಧ ದಿನ ಈ ಮೂರುವರೆ ದಿನಗಳು ಮೂರುವರೆ ವಜ್ರದಷ್ಟೇ ಪವಿತ್ರವಾದ ದಿನವಂತೆ. ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗೆನೆ ಸೂರ್ಯ ದೇವ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ. ಇನ್ನೂ ಉಡುಪಿ, ಮಂಗಳೂರು ಕಡೆ, ಉತ್ತರ ಭಾರತದ ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಅಂದ್ರೆ ‘ಬಿಸು’ ಹಬ್ಬವನ್ನು ಆಚರಿಸುತ್ತಾರೆ.  ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದು, ಪಂಜಾಬ್‌ನಲ್ಲಿ ಬೈಸಾಖಿ ಎಂದು, ಸಿಂಧಿಗಳಲ್ಲಿ ಚೈತಿ ಚಂದ್ ಎಂದು, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸ್ತಾರೆ.

  ರೈತರಿಗೆ ಎಷ್ಟು ವಿಶೇಷ ಈ ಹಬ್ಬ..!

  “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಈ ಹಾಡನ್ನು ಕೇಳಿದ್ದೀರಿ ಅಲ್ವಾ..ಯುಗಾದಿ ಬಂತು ಅಂದ್ರೆನೇ ನಮ್ಮೆಲ್ಲರ ತುಟಿಯಂಚಿನಲ್ಲಿ ಈ ಹಾಡನ್ನು ಗುಣುಗುಟ್ತೇವೆ… ಹಬ್ಬ ಅಂದ್ರೇನೆ ಖುಷಿ ಅದರಲ್ಲೂ ಹೊಸ ವರುಷವನ್ನು ಹೊತ್ತು ತರುವ ಯುಗಾದಿ ಯಂದಂತೂ ಎಲ್ಲಿಲ್ಲದ ಸಂಭ್ರಮ ಸಡಗರ. ಈ ಹಬ್ಬ ರೈತರ ಪಾಲಿಗೂ ವಿಶೇಷ ದಿನ. ಹೊಸ ಬೆಳೆಯ ಖುಷಿಯಲ್ಲಿಯೂ ಈ ಹಬ್ಬದ ಸಂಭ್ರಮ ರೈತಾಪಿ ವರ್ಗದಲ್ಲಿ ಇಮ್ಮಡಿಯಾಗಿರುತ್ತದೆ. ರೈತರು ತಾವು ಬೆಳೆದಿರುವ ಮೊದಲ ಬೆಳೆಯ ಕಟಾವು ಮಾಡಿ ಯುಗಾದಿ ಹಬ್ಬಂದು ವಿಶೇಷ ಪೂಜೆಯನ್ನು ಮಾಡ್ತಾರೆ.

  ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಡಗರ. ಹಾಗೆನೇ ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆಯೂ ಹೌದು,, ಯುಗಾದಿಯಂದು ಭೂಮಿಯನ್ನು ಉಳುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಇನ್ನೂ ನಾಗರಿಕತೆ  ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿದೆ. ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು ಯುಗಾದಿ ಹಬ್ಬದ ದಿನ ನಡೆಸುವ ರಾಶಿಪೂಜೆ, ಭೂಮಿ  ಪೂಜೆ, ಕಾಣಲು ಸಿಗುವುದು ಇತ್ತೀಚೆಗೆ ಬಲು ಅಪರೂಪ… ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನ ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯುವ ದಿನ ಅಂತಾನೂ ಹೇಳ್ತಾ ಇದ್ರು..

  ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು  ಜಮೀನುಗಳಿಗೆ ಹೊರಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಕಣಗಿಲೆ ಹೂವು, ಮಂಡೆ ಹುರಿ ಕಟ್ಟುತ್ತಾರೆ. ಜೊತೆಗೆ ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಗದ್ದೆಗೆ ಗೊಬ್ಬರ ಸಿಂಪಡಿಸಿ, ಹೊಸ ವರ್ಷದ ಮೊದಲ ದಿನ ಕೃಷಿಯನ್ನು ಆರಂಭಿಸಿ ಕಾಲ ಕಾಲಕ್ಕೆ ಮಳೆ ಬೆಲೆ ಚೆನ್ನಾಗಿ ಬರಲಿ.. ರೋಗ-ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡಿಕೊಳ್ತಾರೆ. ಯುಗಾದಿ ಆರಂಭವಾಗುತ್ತಿದ್ದಂತೆ ಮಳೆಯ ಸಿಂಚನ ಭುವಿಯನ್ನು ತಂಪೆರೆಯಲು ಆರಂಭವಾಗುತ್ತೆ..  ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಇಂದಿಗೂ ಕೆಲವೆಡೆ ಜೀವಂತವಾಗಿದೆ.

  ಹೊಸ ಉಡುಪು.. ಘಮ-ಘಮಿಸುವ ಖಾದ್ಯ..!!

  ಉಳಿದೆಲ್ಲ ಹಬ್ಬಗಳಿಗಿಂತ ಯುಗಾದಿ ಆಚರಣೆ ಕೊಂಚ ಬೇರೆ. ಹೊಸ ವರ್ಷದ ಹಬ್ಬವೆಂದರೆ ಹೊಸತನ ಇರಲೇಬೇಕಲ್ವಾ… ಈ ದಿನ ಮನೆಯವರೆಲ್ಲರಿಗೂ ಧರಿಸಲು ಹೊಸ ಉಡುಪುಗಳು.. ಅಡುಗೆ ಕೋಣೆಯಲ್ಲಿ ಘಮ ಘಮಿಸುವ ತರತರದ ಯುಗಾದಿ ಸ್ಪೆಷಲ್ ಖಾದ್ಯಗಳು.. ಅಬ್ಬಾ ಯಾರಿಗೆ ಇಷ್ಟ ಇಲ್ಲಾ ಹೇಳಿ ಈ ಹಬ್ಬ.. ಹಬ್ಬ ಹರಿದನಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳ ಬಗ್ಗೆ ಮಾತೇ ಇಲ್ಲ.., ಹಬ್ಬ ಅಂದ್ರೇನೆ ಬಗೆಬಗೆಯ ತಿಂಡಿ ತಿನಿಸುಗಳು ತಯಾರಾಗುತ್ತೆ.  ಯುಗಾದಿಗೆ ಕರ್ನಾಟಕದಲ್ಲಿ ಹೋಳಿಗೆ ಅಂದಿನ ವಿಶೇಷ ಖಾದ್ಯ.. ಬೆಲ್ಲದ ಪಾನಕ, ಶಾವಿಗೆ ಕೂಡ ಅಂದಿನ ಸ್ಪೆಷಲ್.. ಮಹಾರಾಷ್ಟ್ರದಲ್ಲಿ ಹೋಳಿಗೆಯನ್ನೇ ಹೋಲುವ ಪೂರಣ್‌ ಪೋಳಿ ತಯಾರಿಸುತ್ತಾರೆ. ಆಂಧ್ರ, ತೆಲಂಗಾಣದಲ್ಲಿ ಬೇವು- ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಹಣ್ಣುಗಳ ಮಿಶ್ರಣ ಮಾಡಿ ‘ಪಚ್ಚಡಿ’ಯನ್ನ ತಯಾರಿಸುತ್ತಾರೆ. ಈ ಆರೂ ಪದಾರ್ಥಗಳು ಆರು ಗುಣಗಳನ್ನು ಸಾರುತ್ತವೆ ಎಂಬುದು ಅಲ್ಲಿಯವರ ನಂಬಿಕೆ. ಬೆಲ್ಲ ಸುಖ-ಸಂತೋಷಕ್ಕೆ, ಬೇವು ದುಃಖ ಮತ್ತು ನೋವನ್ನು ಸಹಜತೆಯಿಂದ ಸ್ವೀಕರಿಸಲು, ಮಾವು -ಉತ್ಸಾಹಕ್ಕೆ, ಕಾಳುಮೆಣಸು ಕೋಪ ನಿಗ್ರಹಕ್ಕೆ, ಉಪ್ಪು- ನಮ್ರತಾ ಭಾವಕ್ಕೆ, ಹುಣಸೆ – ಸ್ವೀಕರಣಾ ಭಾವದ ಸಂಕೇತವಾಗಿದೆ. ಹಲವು ಪ್ರಾಂತ್ಯಗಳಲ್ಲಿ, ಹೊಸ ಮಾವಿನ ಮಿಡಿಯ ಉಪ್ಪಿನ ಕಾಯಿ ತಯರಿಸುವುದೂ ಇದೆ.

  ಯುಗಾದಿಯನ್ನು ಹೇಗೆ ಆಚರಣೆ ಮಾಡ್ತಾರೆ?

  ಈ ಹೊಸ ವರ್ಷವನ್ನು ಹೊಸತಾಗಿ ಆರಂಭಿಸಲು ನಾನಾ ಯೋಜನೆಗಳನ್ನು ಹಾಕುತ್ತಾರೆ. ಇನ್ನೂ ಕೆಲವರು ದೇವಾಲಯಗಳಿಗೆ ಭೇಟಿ ನೀಡಿ ಭಗವಂತನ ಆಶೀರ್ವಾದವನ್ನು ಪಡಿತಾರೆ.  ಈ ದಿನ ಬಡವರಿಗೆ ದಾನ ಧರ್ಮವನ್ನು ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯೂ ಇದೆ. ಈ ವರ್ಷವನ್ನು ಸ್ವಾಗತಿಸಲು ಮನೆಯನ್ನು ಸ್ವಚ್ಛವಾಗಿಟ್ಟು, ಮನೆಯ ಮುಂದೆ ಬಣ್ಣ-ಬಣ್ಣದ ಕಣ್ಮನ ಸೆಳೆಯುವ ರಂಗೋಲಿಯನ್ನು ಹಾಕ್ತಾರೆ.  ಯುಗಾದಿಯ ದಿನ ಬೆಳ್ಳಂಬೆಳಿಗ್ಗೆ, ಮನೆಯವರೆಲ್ಲಾ ಅಭ್ಯಂಜನ ಸ್ನಾನ ಮಾಡಿ, ನವ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವ ಸಂಭ್ರಮ.  ಮಾವಿನ ಎಲೆಗಳನ್ನು ದೇವರ ಮನೆಯ ಕಲಶದಲ್ಲಿ ಅದ್ದಿ, ಮನೆಯ ಮೂಲೆ ಮೂಲೆಗೂ ನೀರನ್ನು ಸಿಂಪಡಿಸಿ, ಮನೆಯ ಶುಚೀಕರಣ ಮಾಡಿ ,ಮನೆ ದೇವರ ಪೂಜೆಯನ್ನು ಮಾಡಲಾಗುತ್ತದೆ. ಬೇಯಿಸಿದ ಕಡಲೆ ಕಾಳುಗಳ ಪ್ರಸಾದ ತಯಾರಾಗುತ್ತದೆ. ಹಿರಿಯರನ್ನು ನಮಸ್ಕರಿಸಿ, ಆಶೀರ್ವಾದ ಪಡೆಯುವಾಗ ಕಿರಿಯರಲ್ಲಿ ಧನ್ಯತಾಭಾವ. ವರ್ಷವಿಡೀ ನೋವು, ನಲಿವನ್ನು ಸಮನಾಗಿ ಸ್ವೀಕರಿಸೋಣ ಎನ್ನುತ್ತಾ ಬೇವು ಬೆಲ್ಲ ಹಂಚಿ ನಲಿಯುವುದು ಯುಗಾದಿ ಆಚರಣೆಯ ಇನ್ನೊಂದು ವಿಶೇಷನೇ ಸರಿ…

  ಯುಗಾದಿ ಹಬ್ಬ ಸಮೀಪಿಸುತ್ತಿರುವಾಗಲೇ  ಪ್ರಕೃತಿಯ ಮಡಿಲಲ್ಲಿ  ಗಿಡ-ಮರಗಳು ಹಣ್ಣೆಲೆಯನ್ನು ಕಳಚಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಹಾಗೆನೇ ನಮ್ಮ ಜೀವನದಲ್ಲೂ ಹೊಸತನವನ್ನು ಆರಂಭಿಸಲು ಹೊಸ ವರುಷವನ್ನು ಸ್ವಾಗತಿಸಲಾಗುವುದು. ಯುಗಾದಿ ಹಬ್ಬದಂದು ವಿಶೇಷವಾಗಿ ಸೇವಿಸುವ ಬೇವು – ಬೆಲ್ಲ ನಮ್ಮ ಜೀವನದ ಸುಖ- ದುಃಖ ಹಾಗೂ ನೋವು-ನಲಿವಿನ ಸಮತೋಲನವನ್ನು ಸೂಚಿಸುತ್ತದೆ. ಯುಗಾದಿ ದಿನ ನಾವು ಬೇವು ಬೆಲ್ಲವನ್ನು ಸೇವಿಸುವುದರಿಂದ ನಮ್ಮ ಜೀವನದ ಸುಖ – ದುಃಖ ಸಮಾನಾಗಿ ಹಂಚಿಹೋಗಬೇಕು. ವೈಜ್ಞಾನಿಕವಾಗಿ ಹೇಳ್ಬೇಕಂದ್ರೆ ಬೇವು ತಿನ್ನುವುದರಿಂದ ಮನುಷ್ಯನ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವ್ಯಕ್ತಿಯ ದೇಹವನ್ನು ಬಲಪಡಿಸುತ್ತದೆ ಎನ್ನುವ ನಂಬಿಕೆಯಿದೆ. ಬೆಲ್ಲವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಸಮತೋಲನವಾಗುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕೂಡ ಕರಗಿಸುತ್ತದೆ ಎಂದು ಹೇಳಲಾಗುತ್ತೆ. ವರ್ಷದ ಮೊದಲ ದಿನದಂದು ನಾವು ಜೀವನದ ಕಹಿಯನ್ನು ಸ್ವೀಕರಿಸಬೇಕು ಅಂತ ಹೇಳ್ತಾರೆ. ಯಾಕಂದ್ರೆ ವರ್ಷದ ಆರಂಭದಲ್ಲಿ ಕೇವಲ ಸಿಹಿಯಿದ್ದರೆ ಮುಂದೆ ಕಹಿಯನ್ನು ಎದುರಿಸುವ ಶಕ್ತಿ ಸಿಗುವುದಿಲ್ಲ. ಸಿಹಿ-ಕಹಿ ಅಂದರೆ.. ಬೇವು-ಬೆಲ್ಲ ಎರಡೂ ಸಮಾನವಾದರೆ ಜೀವನದಲ್ಲಿ ಎಷ್ಟೇ ತೊಂದರೆಗಳು, ಕಷ್ಟಗಳು ಇದ್ದರೂ ನಾವು ಅದನ್ನು ಗಾಢವಾಗಿ ತೆಗೆದುಕೊಳ್ಳದೆ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮದಾಗುತ್ತೆ.

   

   

   

   

   

   

   

   

   

  DAKSHINA KANNADA

  ಇನ್ಮುಂದೆ ಪರೀಕ್ಷೆಗಳಲ್ಲಿ ಅಕ್ರಮ, ಪೇಪರ್​ ಲೀಕ್ ಮಾಡಿದ್ರೆ 1 ಕೋಟಿ ರೂ ದಂಡ..!

  Published

  on

  ನವದೆಹಲಿ: National Eligibility Test (NET) ಹಾಗೂ National Eligibility cum Entrance Test (NEET) ಪರೀಕ್ಷೆ ಪತ್ರಿಕೆ​ಗಳು ಸೋರಿಕೆ ಆಗಿರೋದು ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಈ ಸಂಬಂಧ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿದ್ದು, ಕಠಿಣ ಶಿಕ್ಷೆಯ ಜೊತೆಗೆ 1 ಕೋಟಿ ರೂಪಾಯಿ ದಂಡ ಇರುತ್ತದೆ ಎಂದು ಕಾಯ್ದೆ ಹೇಳುತ್ತದೆ.

  ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಪರೀಕ್ಷೆಗಳನ್ನು ಮೇ 5ರಂದು ನಡೆಸಲಾಗಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಸದ್ಯ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ.

  ಬೆನ್ನಲ್ಲೇ ಕೇಂದ್ರ ಸರ್ಕಾರ ಕಠಿಣ ಕಾಯ್ದೆಯನ್ನು ಜಾರಿ ಮಾಡಿದೆ. ಕಾಯ್ದೆ ಪ್ರಕಾರ ಅಪರಾಧಿಗಳಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಇರುತ್ತದೆ ಎಂದು ಕಾಯ್ದೆ ಹೇಳುತ್ತದೆ. ಇದೇ ಕಾಯ್ದೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ), ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ), ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಇಂತಹ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ ಎಂದು ಹೇಳಲಾಗುತ್ತಿದೆ.

  ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡುವ ಅಥವಾ ಉತ್ತರ ಪತ್ರಿಕೆಗಳನ್ನು ತಿದ್ದುವ ಅಪರಾಧಿಗಳಿಗೆ 3 ವರ್ಷಗಳಿಂದ 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಕಾಯ್ದೆ ಸೂಚಿಸುತ್ತದೆ. 10 ಲಕ್ಷ ರೂಪಾಯಿವರೆಗೆ ದಂಡ ಕೂಡ ಕಟ್ಟಬೇಕಾಗುತ್ತದೆ.

  ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಗೊತ್ತಾದರೆ ಪೊಲೀಸರು ವಾರಂಟ್ ಇಲ್ಲದೆ ವ್ಯಕ್ತಿಗಳನ್ನು ಬಂಧಿಸಬಹುದು. ಅಕ್ರಮ ನಡೆದಿರುವುದು ಸತ್ಯವೆಂದು ತಿಳಿದರೆ ಕೋರ್ಟ್​​ನಲ್ಲಿ ತಪ್ಪಿತಸ್ತರಿಗೆ ಜಾಮೀನು ಕೂಡ ಸಿಗುವುದಿಲ್ಲ. ಪ್ರಸ್ತುತ ಅಪರಾಧದ ಬಗ್ಗೆ ಗೊತ್ತಿದ್ದರು ಆದರೆ ಅದನ್ನು ವರದಿ ಮಾಡಲು ವಿಫಲರಾಗುವ ಪರೀಕ್ಷಾ ಸೇವಾ ಪೂರೈಕೆದಾರರಿಗೆ ಹಾಗೂ ದುಷ್ಕೃತ್ಯದಲ್ಲಿ ತೊಡಗುವ ಪರೀಕ್ಷಾ ಅಧಿಕಾರಿಗಳು 1 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು. ಜೊತೆಗೆ ಇವರಿಗೆ 5 ವರ್ಷದಿಂದ 10 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ.

  Continue Reading

  chikkamagaluru

  ಇವೆರಡೂ ತಾಣದಲ್ಲಿ ಟ್ರಕ್ಕಿಂಗ್ ನಿರ್ಬಂಧ..!

  Published

  on

  ಮಂಗಳೂರು : ಮಳೆಗಾಲದಲ್ಲಿ ಮಲೆನಾಡಿಗೆ ಹೋದಾಗ ಸಿಗುವ ಅನುಭವವೇ ಬೇರೆ ಆದ ಕಾರಣ ಮಲೆನಾಡಿನ ಟೂರಿಸ್ಟ್‌ ಹಾಟ್‌ಸ್ಪಾಟ್ ಮಳೆಗಾಲದಲ್ಲಿ ಫುಲ್ ಆಗುತ್ತದೆ. ಇನ್ನು ಹಾಟ್‌ ಫೇವರೇಟ್ ಸ್ಪಾಟ್‌ ಆಗಿರುವ ಮುಳ್ಳಯ್ಯನಗಿರಿ, ಎತ್ತಿನಭುಜ ಸೇರಿದಂತೆ ಹಲವಾರು ಪ್ಲೇಸ್‌ಗಳು ಪ್ರವಾಸಿಗರಿಗೆ ಸ್ವರ್ಗವೇ ಸರಿ. ಹೀಗಾಗಿ ಕಳೆದ ಭಾನುವಾರ ( ಜೂನ್ 16 ) ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಟೂರಿಸ್ಟ್‌ ಸ್ಪಾಟ್‌ಗೆ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ಭಾನುವಾರ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಎತ್ತಿನಭುಜಕ್ಕೆ ಟ್ರಕ್ಕಿಂಗ್ ಮಾಡಿದ್ದರು. ಆದ್ರೆ ಇದೀಗ ಸರ್ಕಾರ ಈ ಎರಡೂ ತಾಣಗಳಿಗೆ ಪ್ರವಾಸಿಗರು ಹೋಗದಂತೆ ನಿಷೇಧ ಹೇರಿದೆ.

  ಚಿಕ್ಕಮಗಳೂರು ಜಿಲ್ಲೆಗೆ ಹೋಗುವ ಪ್ರವಾಸಿಗರಿಗೆ ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿ ಎರಡೂ ಕೂಡಾ ಹಾಟ್ ಫೇವರೇಟ್ ಜಾಗ. ಆದ್ರೆ ಸರ್ಕಾರ ಈ ಎರಡೂ ಪ್ರವಾಸಿತಾಣಕ್ಕೆ ಹೋಗದಂತೆ ತಾತ್ಕಾಲಿಕ ನಿಷೇಧ ಹೇರಿದೆ. ಈ ಹಿಂದೆಯೇ ರಾಜ್ಯದ ಚಾರಣ ಪಥಗಳಿಗೆ ಆನ್‌ಲೈನ್‌ ಬುಕ್ಕಿಂಗ್ ಮಾಡಿ ನಿಯಮಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಹೋಗಲು ಅನುಮತಿ ನೀಡಿತ್ತು. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಪ್ಲಾಸ್ಟಿಕ್‌ , ಸೇರಿದಂತೆ ತ್ಯಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಸಂಗ್ರಹ ಆಗುವ ಕಾರಣ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದ್ದರು.

  ಕಳೆದ ಭಾನುವಾರ ಈ ನಿಯಮ ಉಲ್ಲಂಘಿಸಿ ಸಾವಿರಾರು ಜನರು ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಅಲ್ಲಿನ ಅರಣ್ಯ ಅಧಿಕಾರಿಗಳೇ ಕಾರಣವಾಗಿದ್ದು , ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಅರಣ್ಯ ಸಚಿವರು ನೀಡಿ ಈ ಎರಡೂ ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಪ್ರವಾಸಿಗರು ಪ್ರಕೃತಿಯ ವೀಕ್ಷಣೆ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲವಾದ್ರೂ ಪರಿಸರವನ್ನು ಹಾಳು ಮಾಡುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.


  ಇನ್ನು ಮುಂದೆ ಚಾರಣಿಗರಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಲು ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಚಾರಣಗರಿಂದ ಮುಂಗಡ ಹಣ ಪಡೆದುಕೊಂಡು ಪ್ಲಾಸ್ಟಿಕ್ ಹಾಗೂ ಇತರ ಏಕಬಳಕೆಯ ವಸ್ತುಗಳನ್ನು ವಾಪಾಸು ತಂದಲ್ಲಿ ಮುಂಗಡ ಹಣ ವಾಪಾಸು ನೀಡಲಾಗುತ್ತದೆ. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆಯಾಗಿ ಈ ರೀತಿಯ ಕಠಿಣ ಕ್ರಮದ ಅಗತ್ಯ ಇದೆ ಎಂದು ಈ ಬಗ್ಗೆ ಚಿಂತಿಸಲಾಗಿದೆ.

  Continue Reading

  BANTWAL

  ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.

  Published

  on

  ವಿಟ್ಲ:  ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳಾದ ಸಂಜನಾ ರಜಪೂತ ಹಾಗೂ ಪಿ ಕೆ ವಿಕಾಸ್ ಯೋಗ ಮಾರ್ಗದರ್ಶಕರಾಗಿ ಆಗಮಿಸಿ, ಹಲವಾರು ಯೋಗದ ಆಸನಗಳನ್ನು ಪ್ರದರ್ಶಿಸಿ ಅದರ ಮಹತ್ವವನ್ನು ತಿಳಿಸಿದರು.

  ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ,ಶಾಲಾ ಪ್ರಾಂಶುಪಾಲರಾದ ರವೀಂದ್ರ ದರ್ಬೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹ ಶಿಕ್ಷಕಿಯರಾದ ಶೋಭಾ ಎಂ ಶೆಟ್ಟಿ ಹಾಗೂ ಜಯಶೀಲ ಕಾರ್ಯಕ್ರಮ ನಿರ್ವಹಿಸಿದರು.

  Continue Reading

  LATEST NEWS

  Trending