ಮಂಗಳೂರು: ರಾಜ್ಯದಾದ್ಯಂತ ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನದತ್ತ ಸಾಗಿದ ಹಿನ್ನೆಲೆ ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಗಬ್ಬುನಾತ ಹೊಡೆಯುತ್ತಿದೆ.
ಧಾರಾಕಾರವಾಗಿ ಮಳೆಯೂ ಸುರಿಯುತ್ತಿರುವುದರಿಂದ ತ್ಯಾಜ್ಯಗಳು ಚರಂಡಿಯಲ್ಲಿ, ನೀರಿನಲ್ಲಿ ತೇಲುತ್ತಿದೆ. ದ್ರವ ತ್ಯಾಜ್ಯಗಳು ಜನರ ಕಾಲಿನ, ವಾಹನಗಳ ಅಡಿಗೆ ಬಿದ್ದು ಅಪ್ಪಚ್ಚಿಯಾಗುತ್ತಿದೆ. ಜನರೂ ಕೂಡಾ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ.
ಸಿಎಂ ಜತೆಯಲ್ಲಿ ಇಂದು ನಡೆಯುವ ಸಭೆ ಸಫಲವಾಗದೇ ಹೋದಲ್ಲಿ ಈ ಮುಷ್ಕರ ಮತ್ತೆ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಸಂಘಟನೆಯ ಮುಖಂಡರು ಮಾಹಿತಿ ನೀಡಿದ್ದಾರೆ.
ಜುಲೈ 1ರಂದು ಆರಂಭವಾದ ಪೌರ ಕಾರ್ಮಿಕರ ಮುಷ್ಕರ ಭಾನುವಾರವಾದರೂ ಕೊನೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಯಾಗದೇ ಪ್ರತಿಯೊಂದು ವಾರ್ಡ್ ಕೂಡ ಗಬ್ಬೇರಿದೆ. ಅಪಾರ್ಟ್ ಮೆಂಟ್, ಪ್ಲಾಟ್‌ಗಳಲ್ಲಿ ಇರುವವರು ಕಸ ವಿಲೇವಾರಿಯಾಗದೆ ತೊಂದರೆಗೆ ಒಳಗಗುತ್ತಿದ್ದಾರೆ.
ಪೌರ ಕಾರ್ಮಿಕರ ಮುಷ್ಕರ ಮತ್ತಷ್ಟು ತೀವ್ರತೆ ಕಂಡರೆ ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಂತೂ ಬಿಗಡಾಯಿಸುವ ಎಲ್ಲ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜತೆಯಲ್ಲಿ ನಡೆದ ಮಾತುಕತೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಬಳಿಕ ಸಿಎಂ ಜು.4ರಂದು ಮತ್ತೆ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ನಮ್ಮ ಬೇಡಿಕೆಗಳು ಈಡೇರಿದರೆ ಜು.5ರಂದು ತ್ಯಾಜ್ಯ ವಿಲೇವಾರಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ.
ಈಡೇರಿಕೆ ಆಗದೇ ಇದ್ದರೆ ಮತ್ತೆ ಮುಷ್ಕರ ಮುಂದೆ ಸಾಗಲಿದೆ ಎಂದು ಸಫಾಯಿ ಕರ್ಮಚಾರಿ ಸಂಘದ ಕರಾವಳಿ ಭಾಗದ ಸಂಚಾಲಕ ಬಿ.ಕೆ. ಅಪ್ಪಣ್ಣ ಮಾಹಿತಿ ನೀಡಿದ್ದಾರೆ.