ಮಂಗಳೂರು: ಭಾರೀ ವಾದ-ವಿವಾದಕ್ಕೆ ಕಾರಣವಾಗಿದ್ದ ಮಂಗಳೂರಿನ ಲೇಡಿಹಿಲ್ ವೃತ್ತವನ್ನು ನವೀಕರಣಗೊಳಿಸಿ ಇದೀಗ ಬ್ರಹ್ಮಶ್ರೀ ನಾರಾಯ ಗುರು ವೃತ್ತವನ್ನು ನಿನ್ನೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಉದ್ಘಾಟನೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು ಮಹಾನ್ ಪುರುಷರ ಆದರ್ಶಗಳು ನಮಗೆ ಸದಾ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸರಕಾರವು ತನ್ನ ಆಡಳಿತದಲ್ಲಿ ನಾರಾಯಣ ಗುರುಗಳ ತತ್ವ, ಚಿಂತನೆ, ಆದರ್ಶಗಳನ್ನು ಅಳವಡಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು, ಮುಡಾ ಕಮಿಷನರ್ ಭಾಸ್ಕರ್, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್ ಎಸ್ ಸಾಯಿರಾಂ, ಕಾರ್ಯದರ್ಶಿ ಮಾಧವ ಸುವರ್ಣ ಮೊದಲಾದವರಿದ್ದರು.
ಈ ವೃತ್ತಕ್ಕೆ ಲೇಡಿಹಿಲ್ ಸರ್ಕಲ್ ಎಂದೇ ನಾಮಕರಣ ಮಾಡಬೇಕೆಂದು ಹಲವು ಮಂದಿ ಒತ್ತಾಯಿಸಿದ್ದರೆ, ಹಿಂದು ಸಂಘಟನೆಗಳು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಹೆಸರಿಡಬೇಕೆಂದು ಆಗ್ರಹಿಸಿದ್ದವು.
ಕೊನೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಸರು ಅನುಮೋದನೆಗೊಂಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದೇ ಹೆಸರಿಸಲಾಗಿತ್ತು.