ವೆನ್ಲಾಕ್ ಆಸ್ಪತ್ರೆಗೆ ಸಚಿವ ಕೋಟಾ ದಿಢೀರ್ ಭೇಟಿ : ಸಚಿವರಿಂದ ವೈದ್ಯಾಧಿಕಾರಿಗಳಿಗೆ ತರಾಟೆ..!
ಮಂಗಳೂರು : ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಶಾಸಕದ್ವಯರಾದ ಡಾ. ವೈ ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಅವರು ಮಂಗಳೂರಿನಲ್ಲಿರುವ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ರೋಗಿಗಳನ್ನು ಡಾಕ್ಟರ್, ನರ್ಸ್ ಇವರು ನಿರ್ಲಕ್ಷಿಸುತ್ತಿದ್ದಾರೆ, ಖಾಸಗಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸುತ್ತಿದ್ದಾರೆ ಎನ್ನುವ ವ್ಯಾಪಕ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕ ಸದಾಶಿವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ವಾರ್ಡ್ ಗೆ ತೆರಳಿ ರೋಗಿಗಳ ಹಾಗೂ ಅವರ ಮನೆ ಮಂದಿ ಜೊತೆ ಮಾತನಾಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು.
ಮಂಗಳೂರಿನ ಜಿಲ್ಲಾ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ 5 ಜಿಲ್ಲೆಗಳಿಂದ 50 ರಿಂದ 60 ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೆಲವೊಂದು ಚಿಕಿತ್ಸೆಯನ್ನು ನೀಡುವುದಕ್ಕೆ ಖಾಸಗಿ ಆಸ್ಪತ್ರೆಯ ಜೊತೆಗೆ ಒಪ್ಪಂದವನ್ನು ಮಾಡಲಾಗಿದೆ.
ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ಜನಸಾಮಾನ್ಯರಿಗೆ ಸಿಗುವಂತಾಗಬೇಕು, ಇನ್ನು ಮುಂದೆ ನಿರ್ಲಕ್ಷ್ಯ ಮಾಡುವುದು ಕೊನೆಯಾಗಬೇಕು ಎಂದು ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಡಿಎಂಓ ಸದಾಶಿವ್ ರಾವ್, ಕೆಎಂಸಿ ಆಸ್ಪತ್ರೆಯ ವೈದ್ಯರುಗಳೊಂದಿಗೆ ಇದೇ ಸಂದರ್ಭದಲ್ಲಿ ಸಚಿವರು, ಶಾಸಕರು ತುರ್ತು ಸಭೆ ನಡೆಸಿ ರೋಗಿಗಳ ಬಳಿ ಸ್ವತ: ತೆರಳಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.
ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಉತ್ತಮ ಸೌಕರ್ಯ ನೀಡಲು ಯೋಗ್ಯ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಯಿತು.