ಮಂಗಳೂರು; ತಿಂಗಳ ಹಿಂದೆ ಮಂಗಳೂರು ಸೆಝ್ ನಲ್ಲಿರುವ ಶ್ರೀ ಉಲ್ಕ ಫಿಷ್ ಮಿಲ್ ದುರಂತದಲ್ಲಿ ಸಾವಿಗೀಡಾದ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ದೇಗಂಗಾ ಗ್ರಾಮದ ವಲಸೆ ಕಾರ್ಮಿಕರ ಮನೆಗಳಿಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿತು.
ಈ ನಿಯೋಗವು ಪರಿಹಾರ ಮೊತ್ತ ಒದಗಿಸುವ ಕೆಲಸದ ಪ್ರಗತಿ ಪರಿಶೀಲಿಸಿತು. ವಲಸೆ ಕಾರ್ಮಿಕರ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸಿತು.
ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ದುರಂತದ ಸಂದರ್ಭ ಜೊತೆ ನಿಂತ ಸಹಾಯ ಒದಗಿಸಿದ, ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಶ್ರಮಿಸಿದ ಮಂಗಳೂರಿನ ಡಿವೈಎಫ್‌ಐ ಸಂಗಾತಿಗಳಿಗೆ ಕೃತಜ್ಞತೆ ಅರ್ಪಿಸಿದರು.
ಸಣ್ಣ ಸಭೆ ಏರ್ಪಡಿಸಿ ಶಾಲು ಹೊದಿಸಿ ಗೌರವಿಸಿದರು. ಸ್ಥಳೀಯ ಡಿವೈಎಫ್‌ಐ ಮತ್ತು ಸಿಪಿಐಎಮ್ ಮುಖಂಡರು ಉಪಸ್ಥಿತರಿದ್ದರು.
ಕುಟುಂಬಗಳಿಗೆ ಕಂಪೆನಿ ಕಡೆಯಿಂದ ಪರಿಹಾರ ಧನ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಸಂತ್ರಸ್ತರ ಕುಟುಂಬದ ಗುರುತು ದೃಢೀಕರಣಕ್ಕಾಗಿ 24 ಪರಗಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪಟ್ಟಿಯ ಪರಿಶೀಲನೆ ನಡೆಯುತ್ತಿದ್ದು ಬಹುತೇಕ ಪೂರ್ಣಗೊಂಡಿದೆ.
ದೃಢೀಕರಣಗೊಂಡ ಪಟ್ಟಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ತಲುಪಿದ ತಕ್ಷಣ ಕಂಪೆನಿ ಕುಟುಂಬಗಳ ಖಾತೆಗೆ ನಗದು ವರ್ಗಾಯಿಸಲಿದೆ ಎಮದು ನಿಯೋಗ ತಿಳಿಸಿದೆ.