ಮಂಗಳೂರು: ಮಂಗಳೂರು ದಸರಾ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಕುದ್ರೋಳಿ ಕ್ಷೇತ್ರದ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶಾರದೆ, ನವದುರ್ಗೆಯರ ವೈಭವದ ಶೋಭಾಯಾತ್ರೆ ಮಂಗಳೂರಿನ ರಾಜಬೀದಿಗಳಲ್ಲಿ ನಿನ್ನೆ ನಡೆದು ಇಂದು ಮುಂಜಾನೆ ತೆರೆ ಬಿದ್ದಿದೆ.
ಚೆಂಡೆ, ಕೊಂಬು, ಕಹಳೆ, ಭಜನಾ ತಂಡಗಳು, ಅನ್ಯ ಜಿಲ್ಲೆಗಳಿಂದ ಬಂದಿರುವ ವಿವಿಧ ಕಲಾ ಪ್ರಕಾರಗಳು, ವಿವಿಧ ಹುಲಿ ವೇಷಧಾರಿಗಳ ತಂಡಗಳು, ಐತಿಹಾಸಿಕ ಪುರಾಣ ಕಥೆಗಳನ್ನು ಬಿಂಬಿಸುವ ಟ್ಯಾಬ್ಲೋಗಳು, ಡೊಳ್ಳು ಕುಣಿತ ಮೆರವಣಿಗೆಗೆ ಇನ್ನಷ್ಟು ಕಳೆ ನೀಡಿದವು.
ಶರನ್ನವರಾತ್ರಿ ಹಿನ್ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಕುದ್ರೋಳಿ ಕ್ಷೇತ್ರದಲ್ಲಿ ನವದಿನಗಳ ಕಾಲ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟ ಶಾರದೆ, ನವದುರ್ಗೆಯರನ್ನು ಕ್ಷೇತ್ರಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದರು.
ಶನಿವಾರ ಮತ್ತು ಭಾನುವಾರದಂದು ದಾಖಲೆಯ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದರು. ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ದೇವಿ ದರುಶನ ಪಡೆದಿದ್ದರು.
ಕ್ಷೇತ್ರದ ಅಭಿವೃದ್ಧಿ ರೂವಾರಿ ಮಾಜಿ ಮಂತ್ರಿ ಬಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಗಿತ್ತು.
ಮಂಗಳೂರು ದಸರಾ ಜನರ ಭಕ್ತಿ, ಉತ್ಸಾಹ, ದೇವರ ದಯೆಯಿಂದ ಈ ಹಿಂದಿನ ದಸರಾಕ್ಕಿಂತಲೂ ವಿಶಿಷ್ಟ ರೀತಿಯಲ್ಲಿ ನಡೆದಿದೆ. ಮೆರವಣಿಗೆಯೂ ವೈಭವದಿಂದ ಸಾಗಲಿದೆ ಎಂದು ಜನಾರ್ದನ ಪುಜಾರಿ ಹೇಳಿದರು.
ನಗರದ ಪ್ರಮುಖ ರಾಜಬೀದಿಗಳಲ್ಲಿ ರಾತ್ರಿ ಇಡೀ ಸಾಗಿದ ಮೆರವಣಿಗೆ ಇಂದು ಬೆಳಿಗ್ಗೆ 9 ಗಂಟೆ 7 ನಿಮಿಷಕ್ಕೆ ಸರಿಯಾಗಿ ಶಾರದೆಯ ಜಲಸ್ತಂಭನದೊಂದಿಗೆ ಮಂಗಳೂರು ದಸರಾ 2022ರ ವೈಭವ ದಸರಾಕ್ಕೆ ತೆರೆ ಬಿದ್ದಿದೆ.