ಮಂಗಳೂರು: ಮುಂದಿನ 10 ದಿನಗಳವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನೇರ ವಿಮಾನಗಳು ಇರುವುದಿಲ್ಲ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಯುಎಇ ಗೆ ತೆರಳಲು ನಾಲ್ಕು ಗಂಟೆಗಳ ಮುಂಚಿತ ಪಿಸಿಆರ್ ಪರೀಕ್ಷೆ ನಡೆಸಬೇಕು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಾಲ್ಕು ಗಂಟೆಗಳ ಮುಂಚಿತವಾಗಿ ತ್ವರಿತ ಪಿಸಿಆರ್ ಪರೀಕ್ಷೆಯನ್ನು ಪೂರೈಸಲು ಬೇಕಾದ ಸಾಧನಗಳಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ವಿಮಾನ ಸಂಚಾರ ಬಂದ್ ಮಾಡಿದೆ.
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿಗೆ ಸೇವೆ ಒದಗಿಸುವ ಈ ವಿಮಾನ ನಿಲ್ದಾಣವನ್ನು ಉತ್ತರ ಕೇರಳದ ಪ್ರಯಾಣಿಕರು ಯುಎಇ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಗೆ ಪ್ರಯಾಣಿಸಲು ಬಳಸುತ್ತಾರೆ. ಈ ವಿಮಾನ ನಿಲ್ದಾಣವು 2018 ಮತ್ತು 2019 ರ ನಡುವೆ 2.24 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಇದು ಭಾರತದ 50 ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಈ ಸೌಲಭ್ಯ ಇಲ್ಲದಾಗಿದೆ. ಕೆಲ ದಿನಗಳ ಹಿಂದೆ ಯುಎಇಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು, ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ರ‍್ಯಾಪಿಡ್ ಆರ್‌ಟಿಪಿಸಿಆರ್ ಸೌಲಭ್ಯದ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ಈ ವ್ಯವಸ್ಥೆ ಮಾಡಲು ಇನ್ನೂ ಒಂದು ವಾರ ಬೇಕಾಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಮಂಗಳೂರಿನಿಂದ ದುಬೈಗೆ ತೆರಳುವ ಪ್ರಯಾಣಿಕರು ತಮ್ಮ ಲಗೇಜ್‌ಗಳೊಂದಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಬೆಂಗಳೂರು ಇಲ್ಲವೇ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಅಲ್ಲಿ ಮತ್ತೆ ರ‍್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು, ದುಬೈಗೆ ಪ್ರಯಾಣಿಸಬೇಕು. ಈ ಬಗ್ಗೆ ನಮ್ಮ ಕುಡ್ಲ ವಾಹಿನಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಗೊತ್ತಿಲ್ಲ ಎಂಬ ಉತ್ತರ ಬಂದಿತು.
ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದಿಂದ ಸಂಪೂರ್ಣ ಲಸಿಕೆ ಹಾಕಿದ ರೆಸಿಡೆನ್ಸಿ ವೀಸಾ ಹೊಂದಿರುವವರು ದೇಶಕ್ಕೆ ಮರಳಬಹುದು ಎಂದು ಯುಎಇ ಮಂಗಳವಾರ ಘೋಷಿಸಿದೆ.