DAKSHINA KANNADA
ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಂಚಣಿದಾರರ ಪ್ರತಿಭಟನೆ
ಮಂಗಳೂರು: ಕರ್ನಾಟಕ ರಾಜ್ಯ ಭವಿಷ್ಯ ನಿಧಿ ಪಿಂಚಣಿದಾರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಎಂಟು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಪ್ರದರ್ಶನ ಮಂಗಳೂರಿನ ಕಾಪ್ರಿಗುಡ್ಡೆ ಬಳಿಯ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಮುಂಭಾಗ ಇಂದು ಬೆಳಿಗ್ಗೆ ಜರುಗಿತು.
ಪ್ರಾವಿಡೆಂಟ್ ಫಂಡ್ ಪೆನ್ಶನ್ದಾರರಿಗೆ ತಿಂಗಳಿಗೆ ಕನಿಷ್ಠ ಪಿಂಚಣಿ 3000 ರೂಪಾಯಿ ನಿಗದಿ ಮಾಡಬೇಕು, ರದ್ದು ಮಾಡಿರುವ ಕಮ್ಯೂಟೇಶನ್ ಮತ್ತು ಆರ್ಓಸಿ ಸೌಲಭ್ಯವನ್ನು ಮರು ಜಾರಿ ಮಾಡಬೇಕು, ಭವಿಷ್ಯನಿಧಿ ಕಚೇರಿಯಲ್ಲಿ ಖಾಲಿ ಇರುವ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಗಿದೆ.
ಇನ್ನು ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಸಿಐಟಿಯು ನಾಯಕ ಯು ಬಿ ಲೊಕಯ್ಯ, ಕರ್ನಾಟಕ ರಾಜ್ಯ ಭವಿಷ್ಯನಿಧಿ ಪಿಂಚಣಿದಾರರ ಸಂಘದ ಅಧ್ಯಕ್ಷ ಸುಕುಮಾರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದು, ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
ಪ್ರಧಾನ ಮಂತ್ರಿ, ವಿತ್ತ ಸಚಿವರಿಗೆ ಕಾರ್ಮಿಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.
DAKSHINA KANNADA
ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ
ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.
ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.
ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
DAKSHINA KANNADA
ಈ 7 ರೈಲು ನಿಲ್ದಾಣಗಳಲ್ಲಿ ಸಿಗುತ್ತೆ ಅತೀ ಕಡಿಮೆ ಬೆಲೆಗೆ ತಿಂಡಿ, ಊಟ
ಮಂಗಳೂರು: ಭಾರತೀಯ ರೈಲ್ವೆ ಮಂಡಳಿಯು ಕರ್ನಾಟಕದ ಏಳು ನಿಲ್ದಾಣಗಳು ಸೇರಿದಂತೆ ದೇಶದ 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಕಂಪಾರ್ಟ್ಮೆಂಟ್ ಕೋಚ್ಗಳ ಬಳಿ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಒದಗಿಸುವ ಕೌಂಟರ್ಗಳನ್ನು ತೆರೆದಿದೆ.
ಕರ್ನಾಟಕದಲ್ಲಿ ದಕ್ಷಿಣ ರೈಲ್ವೆ ಅಡಿಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ವಿಭಾಗಗಳಲ್ಲಿ ಸಬ್ಸಿಡಿ ಆಹಾರ ಕೌಂಟರ್ಗಳನ್ನು ತೆರೆಯಲಾಗಿದೆ. ಹಾಗೆಯೇ ನೈರುತ್ಯ ರೈಲ್ವೆಯ ಅಡಿಯಲ್ಲಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಈ ಆಹಾರ ಕೌಂಟರ್ಗಳನ್ನು ತೆರೆಯಲಾಗಿದೆ.
ಈ ಯೋಜನೆಯು ಭಾರತೀಯ ರೈಲ್ವೆಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮತ್ತು ಭಾರತೀಯ ರೈಲ್ವೆಯ ಜಂಟಿ ಉಪಕ್ರಮವಾಗಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ ಜನತಾ ಊಟದ ಸೇವೆಯ ಅಡಿಯಲ್ಲಿ ರೈಲ್ವೆ ನಿಲ್ದಾಣದ ರೆಸ್ಟೋರೆಂಟ್ಗಳಲ್ಲಿ ಕಡಿಮೆ ದರದ ಆಹಾರ ಲಭ್ಯವಿತ್ತು. ಈಗ ಕೌಂಟರ್ಗಳು ನೇರವಾಗಿ ಪ್ಲಾಟ್ಫಾರ್ಮ್ಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.
ಪ್ರಸ್ತುತ 100 ರೈಲು ನಿಲ್ದಾಣಗಳಲ್ಲಿ 150 ಪ್ಲಾಟ್ಫಾರ್ಮ್ಗಳು ಈ ಸೌಲಭ್ಯವನ್ನು ನೀಡುತ್ತವೆ. ಬೆಳಗಿನ ಉಪಹಾರ 20 ರೂ., ಲಘು ಊಟ 50 ರೂ., 3 ರೂ.ಗೆ 200 ಎಂಎಲ್ ನೀರು ನೀಡಲಾಗುತ್ತದೆ. ಈ ಮಾಹಿತಿಯನ್ನು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆ ಈ ಯೋಜನೆಯು ರೈಲು ಪ್ರಯಾಣಿಕರ ಆಹಾರ ಸಮಸ್ಯೆಯನ್ನು ಪರಿಹರಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಆರೆಂಜ್ ಅಲರ್ಟ್ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.