ಮಂಗಳೂರು : ನಗರದ ಹೊಯ್ಗೆ ಬಜಾರ್ ಬಳಿ ಒಣ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಬಿಹಾರ ಮೂಲದ ದಂಪತಿಯ 2 ವರ್ಷದ ಹಸುಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆಗೆ ಯತ್ನಿಸಿದ ಪೈಶಾಚಿಕ ಘಟನೆ ನಡೆದಿದೆ.
ಈ ಸಂಬಂಧ ಆರೋಪದ ಮೇಲೆ ಬಿಹಾರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬಿಹಾರ ಮೂಲದ ಚಂದನ್ ಎಂದು ಗುರುತಿಸಲಾಗಿದೆ.
ನಗರದ ಹೊಯಿಗೆ ಬಜಾರ್ನಲ್ಲಿರುವ ಫಿಶ್ ಕಟ್ಟಿಂಗ್ ಯಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸುಮಾರು 30 ಬಿಹಾರ್ ಮೂಲದ ಕುಟುಂಬದ 75 ಜನ ವಾಸಿಸುತ್ತಿದ್ದಾರೆ.
ಎರಡು ವರ್ಷದ ಮಗುವಿನ ತಂದೆ-ತಾಯಿ ಕೆಲಸ ಮುಗಿಸಿದ ಬಳಿಕ ಫ್ಯಾನ್ ಖರೀದಿಗೆಂದು ಮಾರುಕಟ್ಟೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿತ್ತು. ಸಂಜೆ ಆರು ಗಂಟೆ ವೇಳೆಗೆ ಪೋಷಕರು ಮನೆಗೆ ಬಂದಾಗ ಮಗು ನಾಪತ್ತೆಯಾಗಿತ್ತು.
ಹುಡುಕಾಟ ನಡೆಸಿದ ನಂತರ ರಾತ್ರಿ 9 ಗಂಟೆಗೆ ಉಪ್ಪು ನೀರು ಶೇಖರಣೆಗೊಳ್ಳುವ ಟ್ಯಾಂಕ್ನಲ್ಲಿ ಮಗು ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಮಗು ಪ್ರಜ್ಞೆ ತಪ್ಪಿದ್ದು, ಮನೆಯವರು ಮಗು ಸಾವನ್ನಪ್ಪಿದೆ ಎಂದು ತಿಳಿದುಕೊಂಡಿದ್ದರು.
ಬಳಿಕ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇನ್ಪೋಸಿಸ್ ಅತ್ಯಾಧುನಿಕ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ಚಂದನ್ ನಿನ್ನೆ ಸಂಜೆ 4 ಗಂಟೆ ವೇಳೆಗೆ ಮಗುವನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿ, ಉಪ್ಪು ನೀರಿನ ಟ್ಯಾಂಕ್ಗೆ ಬಿಸಾಡಿ ಹೋಗಿದ್ದ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಈತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮಗು ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ರೆ.