ಮಂಗಳೂರು: ಇತ್ತೀಚೆಗೆ ಕುಂದಾಪುರದ ಹರೀಶ್ ಬಂಗೇರಾ ರೀತಿಯದ್ದೇ ಪ್ರಕರಣದಲ್ಲಿ ಒಂದು ವರ್ಷ 8 ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮಂಗಳೂರಿನ ಓರ್ವ ವ್ಯಕ್ತಿ ಬಂಧಿತನಾಗಿದ್ದಾನೆ.
ಈ ಬಗ್ಗೆ ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಆತನ ಬಿಡುಗಡೆಗೆ ಆತನ ನೊಂದ ಕುಟುಂಬ ಕಣ್ಣೀರಿಟ್ಟಿದೆ.
ನಗರದ ಬಿಕರ್ನಕಟ್ಟೆಯ ಶೈಲೇಶ್ ಎಂಬಾತ ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರು ತನ್ನ ಫೇಸ್‌ಬುಕ್‌ನಲ್ಲಿ ದೇಶಪ್ರೇಮವನ್ನು ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಾರೆ. ಇದನ್ನು ಫೇಸ್‌ಬುಕ್‌ನಿಂದ ತೆಗೆಯಬೇಕು.
ಇಲ್ಲದಿದ್ದರೆ ನಿನ್ನನ್ನು ಸೌದಿಯಲ್ಲಿ ಉಳಿಯಲು ಬಿಡುವುದಿಲ್ಲ. ನಿನ್ನನ್ನು ಸೌದಿಯಲ್ಲೇ ಮುಗಿಸಿ ಹಾಕುತ್ತೇನೆ ಎಂಬ ಬೆದರಿಕೆ ಕರೆ ಬರುತ್ತದೆ. ಇದರಿಂದ ಬೆದರಿದ ಶೈಲೇಶ್ ತಮ್ಮ ಹೆಸರಿನ ಫೇಸ್‌ಬುಕ್ ಖಾತೆಯನ್ನೇ ಅಳಿಸಿ ಹಾಕುತ್ತಾರೆ.
ಇದಾದ ನಂತರ 2020 ಜನವರಿ 16ರಂದು ಫೇಸ್‌ಬುಕ್‌ನಲ್ಲಿ ಶೈಲೇಶ್ ಕುಮಾರ್ ಹೆಸರಲ್ಲಿ ಫೇಕ್ ಐಡಿ ಸೃಷ್ಟಿಯಾಗುತ್ತದೆ. ಇದರಲ್ಲಿ ಫೆ.12 ಮತ್ತು 15ರಂದು ಇದೇ ಅಕೌಂಟ್‌ನಿಂದ ಇಸ್ಲಾಂ ವಿರೋಧಿ ಪೋಸ್ಟ್‌ಗಳು, ಸೌದಿ ದೊರೆಯ ಬಗೆಗಿನ ವಿರುದ್ಧ ಅನೇಕ ಪೋಸ್ಟ್‌ಗಳಾಗಿರುತ್ತವೆ.
ಈ ಬಗ್ಗೆ ಸ್ವತಃ ತಾನು ಕೆಲಸ ಮಾಡುವ ಕಂಪೆನಿಗೆ ಮಾಹಿತಿ ನೀಡಿದಾಗ, ಕಂಪೆನಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸುತ್ತಾರೆ. ಅದರಂತೆ 2020ರ ಫೆ.23ರಂದು ಖುದ್ದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ,
ಅಲ್ಲಿನ ಪೊಲೀಸರು ಶೈಲೇಶ್ ಕುಮಾರ್ ಅವರನ್ನೇ ಬಂಧಿಸುತ್ತಾರೆ.
ಇದನ್ನರಿತ ಕುಟುಂಬ ಮಂಗಳೂರು ನಗರ ಸೈಬರ್ ಕ್ರೈಂ ಠಾಣೆ, 2021 ಆ.28ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು,
ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಂತರ ವಿದೇಶಾಂಗ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ತಿಂಗಳಿಗೊಂದು ಸಲ ದೂರವಾಣಿ ಮುಖಾಂತರ ಮಾತನಾಡುತ್ತಿದ್ದರು. ಆದರೆ ಕಳೆದ 8-9 ತಿಂಗಳಿಂದ ಸಂಪರ್ಕ ಕಡಿತಗೊಂಡಿತ್ತು. 2 ತಿಂಗಳ ಹಿಂದೆ ಕರೆ ಮಾಡಿ ಕೋರ್ಟಿಗೆ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಆದರೆ ಆ ನಂತರ ಬೆಳವಣಿಗೆ ಏನಾಗಿದೆ ಎಂಬುವುದು ಗೊತ್ತಿಲ್ಲ. ಅವರ ಕಂಪನಿ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ದೂರವಾಣಿ ಕರೆಯಲ್ಲಿ ಕೇವಲ 2ರಿಂದ 3 ನಿಮಿಷ ಮಾತನಾಡುತ್ತಾರೆ.
ಇದು ಇಸ್ಲಾಂ ಅಥವಾ ಸೌದಿ ದೊರೆಯ ಅವಹೇಳನ ಬಗ್ಗೆ ಪ್ರಕರಣ ಆದುದರಿಂದ ಭಾರತದ ಯಾವೂದೇ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳು ನೇರವಾಗಿ ಮುಂದೆ ಬರಲು ತಯಾರಿಲ್ಲ.
ಜೊತೆಗೆ ನ್ಯಾಯವಾದಿಗಳು ಸಹ ಮುಂದೆ ಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದೀಗ ಶೈಲೇಶ್ ಪತ್ನಿ ಸರಿತಾ ಅವರು ಅವರ ತಾಯಿ ಮನೆಯಲ್ಲಿದ್ದು, ಇಬ್ಬರು ಪುಟ್ಟ ಪುಟ್ಟ ಮಕ್ಕಳಿದ್ದಾರೆ.
ಪತಿಯ ಬರುವಿಕೆಗಾಗಿ ಬಕ ಪಕ್ಷಿಯಂತೆ ಸರಿತಾ ಕಾಯುತ್ತಿದ್ದಾರೆ.
ಈ ಹಿಂದೆ ಇಂತಹದೇ ಪ್ರಕರಣದಲ್ಲಿ ಕುಂದಾಪುರದ ಹರೀಶ್ ಬಂಗೇರ ಬಂಧನಕ್ಕೊಳಕ್ಕಾಗಿ ನಂತರ ತಾಯ್ನಾಡಿಗೆ ಮರಳಿದ್ದರು.
ಅದೇ ರೀತಿ ಶೈಲೇಶ್ ಅವರ ಬಂಧನ ಮುಕ್ತ ಮಾಡಿ, ತಾಯ್ನಾಡಿಗೆ ಮರಳುವಂತೆ ಭಾರತ ಸರ್ಕಾರ ಒತ್ತಡ ಹೇರಬೇಕು ಎಂದು ಜಿತೇಂದ್ರ ಕೊಟ್ಟಾರಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶೈಲೇಶ್ ಪತ್ನಿ ಸರಿತಾ, ಪುತ್ರಿ, ಶ್ರೇಯಸ್ ಇದ್ದರು.