ಮಂಗಳೂರು :ಮಂಗಳೂರು ನಗರದಲ್ಲಿ ನಡೆಯಲಿದ್ದ ಗ್ಯಾಂಗ್ ವಾರನ್ನು ಸಕಾಲದಲ್ಲಿ ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ತಡೆದಿದ್ದಾರೆ.
ಈ ಮೂಲಕ ನಗರದಲ್ಲಿ ನಡೆಯಲಿದ್ದ ದೊಡ್ಡ ರಕ್ತಪಾತ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ತಡೆದಿದ್ದಾರೆ. ಈ ಸಂಬಂಧ ಮಂಗಳೂರಿನ ಕಂಕನಾಡಿ ಪೊಲೀಸರು ಮತ್ತೆ ಐದು ಮಂದಿ ಆರೋಪಿಗಳನ್ನು ನಿನ್ನೆ ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕುಲಶೇಖರ ಕಟ್ಟೆಯ ಬಳಿ ನಡೆದ ದರೋಡೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಎಂಬವರು ನೀಡಿದ ಮಾಹಿತಿಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಆಕಾಶ್‌ಭವನ ಶರಣ್‌ನ ತಮ್ಮ ಧೀರಜ್ ಯಾನೆ ಕುಟ್ಟ ಆಕಾಶಭವನ , ಮಧ್ಯಪ್ರದೇಶದ ರಾಜೇಶ್ ಥೋಮರ್ ಯಾನೆ ರಾಜ್ಬೀರ್ , ಬಜ್ಪೆ ಆದ್ಯಪಾಡಿಯ ರಾಕೇಶ್ ಕಂಬಳಿ ಯಾನೆ ರಾಕಿ , ಎಕ್ಕಾರಿನ ರಾಜೇಶ್ ಆಚಾರ್ಯ, ಆಕಾಶಭವನದ ಸಾಗರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಒಂಭತ್ತು ಮಂದಿಯೂ ನಗರದ ಮತ್ತೊಂದು ಕ್ರಿಮಿನಲ್ ಗ್ಯಾಂಗ್‌ವೊಂದರಲ್ಲಿ ಸಕ್ರಿಯರಾಗಿರುವ ರೌಡಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯಾ, ಗೌರೀಶ್ ಯಾನೆ ಗೌರಿ ಎಂಬವರನ್ನು ಕೊಲೆ ಮಾಡಲು ಸಂಚು ಹೂಡಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಈ ಒಂಭತ್ತು ಮಂದಿ ಆರೋಪಿಗಳೂ ಕೂಡ ರೌಡಿ ಆಕಾಶಭವನದ ಶರಣ್ ಯಾನೆ ರೋಹಿದಾಸ್‌ನ ಸಹಚರರು ಎನ್ನಲಾಗಿದೆ. ಶರಣ್ ಜೈಲಿನಲ್ಲಿದ್ದುಕೊಂಡು ತನ್ನದೇ ಆದ ಗ್ಯಾಂಗ್ ಕಟ್ಟಿದ್ದ. ಅಲ್ಲದೆ ಶ್ರೀಮಂತರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುವುದು, ಹಣಕಾಸಿನ ಡೀಲ್ ಮಾಡುವುದು, ಮಾದಕ ವಸ್ತುಗಳನ್ನು ಸಾಗಿಸುವುದು, ಮರಳು ದಂಧೆಯಲ್ಲಿ ತೊಡಗಿಸಿಕೊಳ್ಳುವುದು ಇತ್ಯಾದಿ ಅಕ್ರಮ ಚಟುವಟಿಕೆಗಳ ಮೂಲಕ ಹಣ ಗಳಿಸುವ ಉದ್ದೇಶ ಹೊಂದಿದ್ದ.
ಮಂಗಳೂರಿನಲ್ಲಿರುವ ಎಲ್ಲಾ ಗ್ಯಾಂಗ್‌ಗಳೂ ತನ್ನ ಕೈಕೆಳಗೆ ಇರಬೇಕು ಎಂದು ಬಯಸಿದ್ದ. ಅದಕ್ಕಾಗಿ ತನ್ನ ಎದುರಾಳಿ ಗ್ಯಾಂಗನ್ನು ಮಟ್ಟ ಹಾಕಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.17ರಂದು ಕುಲಶೇಖರ ಕಟ್ಟೆಯ ಬಳಿ ದರೋಡೆಗೈದು ನಾಲ್ಕು ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಅವರೆಲ್ಲರೂ ನೀಡಿದ ಮಾಹಿತಿಯಂತೆ ಉಳಿದ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದರಲ್ಲಿ ಮಧ್ಯಪ್ರದೇಶದ ರಾಜೇಶ್ ಥೋಮರ್ ಎಂಬಾತ ಈ ಗ್ಯಾಂಗ್‌ಗೆ ಮಾರಕಾಸ್ತ್ರ ಪೂರೈಕೆ ಮಾಡಿದ್ದ. ಈತನು 2016ರಲ್ಲಿ ಕಟೀಲಿನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಯೂ ಆಗಿದ್ದ.
ರಾಕೇಶ್ ಕಂಬಳಿಯ ಮೇಲೆ ಮಣಿಪಾಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ರಾಜೇಶ್ ಆಚಾರ್ಯನ ಮೇಲೆ ಬಜ್ಪೆ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದೆ.ಬಂಧಿತ ಐವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.