ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿನಲ್ಲಿ ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನಗಳನ್ನು ನೀಡಿದರು.
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿನಲ್ಲಿ ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನಗಳನ್ನು ನೀಡಿದರು.
ಈ ಸಭೆಯಲ್ಲಿ ಆರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು, ಮಾಜಿ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 118 ಆಹ್ವಾನಿತ ನಾಯಕರು ಭಾಗವಹಿಸಿದ್ದರು.
ಸಂಜೆ 6.15ರಿಂದ ಸುಮಾರು ಒಂದೂಕಾಲು ಗಂಟೆ ಮಂಗಳೂರು ಮತ್ತು ಶಿವಮೊಗ್ಗ ವಿಭಾಗೀಯ ಪ್ರಮುಖರ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಮುಖ ಚರ್ಚೆಗಳು ನಡೆದವು.
ಆರು ಜಿಲ್ಲೆಗಳಲ್ಲಿ 33 ಕ್ಷೇತ್ರಗಳಿದ್ದು, ಇದರಲ್ಲಿ 29 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದೆ.
ಈ 29 ಕ್ಷೇತ್ರ ಉಳಿಸಿಕೊಂಡು ಉಳಿದ ನಾಲ್ಕು ಕ್ಷೇತ್ರದಲ್ಲಿ ಗೆದ್ದು ಬರುವಂತೆ ಮಾರ್ಗದರ್ಶನ ನೀಡಿದರು.
ರಾಜ್ಯಕ್ಕೆ ಇನ್ನೊಮ್ಮೆ ತಿಂಗಳ ನಂತರ ಬಂದು ಪರಿಶೀಲನೆ ನಡೆಸುತ್ತೇನೆ ಆ ಸಮಯದೊಳಗೆ ನನಗೆ ರಿಸಾಲ್ಟ್ ಬೇಕು..ಫೀಲ್ಡಿಗಿಳಿದು ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ ”ಮುಂದಿನ ಒಂದು ತಿಂಗಳಲ್ಲಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕು. ಮತ್ತೆ ತಿಂಗಳ ನಂತರದ ಬಂದು ಇನ್ನೊಮ್ಮೆ ಪರಿಶಿಲನೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಅಭ್ಯರ್ಥಿ ವಿಚಾರವಾಗಿ ವಿಭಾಗ ಪ್ರಮುಖರ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ” ಎಂದರು.
”ಎರಡು ವಿಭಾಗದ 33 ವಿಧಾನಸಭಾ ಕ್ಷೇತ್ರಗಳಲ್ಲಿ 29 ಕ್ಷೇತ್ರಗಳಲ್ಲಿ ಬಿಜೆಪಿ ಇದೆ. ಅದನ್ನು ಉಳಿಸಿಕೊಂಡು ಉಳಿದ ನಾಲ್ಕು ಕ್ಷೇತ್ರ ಗೆಲ್ಲಲು ಅಮಿತ್ ಶಾ ಮಾರ್ಗದರ್ಶನ ನೀಡಿದ್ದಾರೆ.
ಟಿಕೆಟ್ ಬಗ್ಗೆ ಏನೂ ಚರ್ಚೆ ಆಗಿಲ್ಲ” ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
‘ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಗೆಲ್ಲಬೇಕು ಎಂದು ಸ್ಪುಟವಾಗಿ ಅಮಿತ್ ಶಾ ಅವರು ಮಾರ್ಗದರ್ಶನ ನೀಡಿದ್ದಾರೆ.
ಇದರಿಂದ ನಮ್ಮಲ್ಲಿ ರಣೋತ್ಸಾಹ ಹೆಚ್ಚಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರೀಯಿಸಿದ್ದಾರೆ.