ಬೆಂಗಳೂರು : ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು/ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ತಿಳಿಸಲಾಗಿದೆ.
ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್-19 ಪರೀಕ್ಷೆ ಪುನರಾವರ್ತನೆ, ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಕ್ರಮಗಳ ಹೊರತಾಗಿಯೂ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವರದಿಯನ್ನು ಪರಿಗಣಿಸಿ ಈ ಮಾರ್ಗಸೂಚಿ ಹೊರಡಿಸಲಾಗಿದೆ.
ಕೇರಳ ಉದ್ಯೋಗಿಗಳು ಅಕ್ಟೋಬರ್ ಅಂತ್ಯದವರೆಗೂ ಕರ್ನಾಟಕಕ್ಕೆ ಬಾರದಂತೆ ಅಥವಾ ಮುಂದೂಡುವಂತೆ ಎಲ್ಲಾ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲರು, ನರ್ಸಿಂಗ್, ಪ್ಯಾರಾ ಮೆಡಿಕಲ್ ಸಂಸ್ಥೆಗಳು, ಆಸ್ಪತ್ರೆಗಳ ಮಾಲೀಕರು, ನರ್ಸಿಂಗ್ ಹೋಮ್ ಗಳು, ಕಚೇರಿಗಳು, ಹೋಟೆಲ್ ಗಳು, ಕಾರ್ಖಾನೆಗಳು, ಕೈಗಾರಿಕೆಗಳು ಮತ್ತಿತರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.