ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣ ಹಾಗು ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣ ಹಾಗು ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಎದುರಿನ ಬೊಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿ ಪ್ರಸನ್ನ ನಾರಾಯಣ ಆಚಾರ್ಯ ಎಂಬವರ ಮನೆಯಲ್ಲಿ 2022 ಸಪ್ಟೆಂಬರ್ 17 ರಂದು ಕಳ್ಳತನ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸೆಂಬರ್ 27 ರಂದು ಆರೋಪಿಗಳಾದ ಕಾಸರಗೋಡಿನ ಪೆರಿಯ ನಿವಾಸಿ 42 ವರ್ಷ ಪ್ರಾಯದ ಹಾಶಿಮ್ ಎ.ಎಚ್ ಹಾಗು ಕುಂಬಳೆಯ 48 ವರ್ಷ ಪ್ರಾಯದ ಸಿದ್ಧಿಕ್ ಎಂಬಾತನನ್ನು ಮಡಿಕೇರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಬಳಿಕ ಪೊಲೀಸರು ನ್ಯಾಯಾಲಯದ ಅನುಮತಿಯನ್ನು ಪಡೆದು ಆರೋಪಿಗಳನ್ನು ಪುನ: ಕಸ್ಟಡಿಗೆ ಪಡೆದುಕೊಂಡು ವಿಚಾರಣೆಗೆ ಒಳ ಪಡಿಸಿದಾಗ ಅವರು ಉಡುಪಿ ನಗರ ಪೊಲೀಸ್ ಠಾಣೆ, ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ಕೇರಳದ ಮಂಜೇಶ್ವರ ತಾಲೂಕಿನ ನೀರ್ಚಾಲ್ ಕಾಳಿಕಾಂಬ ಜುವೆಲ್ಸರ್ಸ್ ನಲ್ಲಿ ಮಾರಾಟ ಮಾಡಿದ್ದರು.
ಆರೋಪಿಗಳು ನೀಡಿದ ಮಾಹಿತಿಯಂತೆ ಪೊಲೀಸರು ನೀರ್ಚಾಲಿನ ಜ್ಯುವೆಲ್ಲರಿ ಅಂಗಡಿಗೆ ತೆರಳಿ 15 ಲಕ್ಷ ರೂ. ಮೌಲ್ಯದ ಒಟ್ಟು 300 ಗ್ರಾಂ ಚಿನ್ನ ಹಾಗು 1 ಲಕ್ಷ ರೂ. ಮೌಲ್ಯದ ಒಟ್ಟು 1,481 ಗ್ರಾಂ ಬೆಳ್ಳಿ ಸೇರಿ ಒಟ್ಟು 16 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಅಂತರ್ ರಾಜ್ಯ ಚೋರರಾಗಿದ್ದು,ಈಗಾಗಲೇ ಕೇರಳ ರಾಜ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಳ್ಳತನ ಹಾಗು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಈ ಪ್ರಕರಣವನ್ನು ಉಡುಪಿ ಜಿಲ್ಲಾ ಎಸ್ ಪಿ ಅಕ್ಷಯ ಎಂ.ಹೆಚ್. ನಿರ್ಧೇಶನದಂತೆ ಇತರ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸರು ಭೇದಿಸಿದ್ದು, ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.