Saturday, August 20, 2022

ಸುರತ್ಕಲ್: ಅನೈತಿಕ ಪೊಲೀಸ್‌ಗಿರಿ ಪ್ರಕರಣ-ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು

ಮಂಗಳೂರು: ಸುರತ್ಕಲ್-ಎನ್‌ಐಟಿಕೆ ಸಮೀಪದ ಟೋಲ್‌ಗೇಟ್ ಬಳಿ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿದ ಐವರು ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಲಾಗಿದೆ.


ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು ಸೋಮವಾರ ರಾತ್ರಿ ಬಜರಂಗ ದಳದ ಜಿಲ್ಲಾ ಪ್ರಮುಖ ಪ್ರೀತಂ ಶೆಟ್ಟಿ,

ಬಜರಂಗ ದಳ ಸುರತ್ಕಲ್ ಪ್ರಖಂಡ ಪ್ರಮುಖ ಅರ್ಶಿತ್, ಶ್ರೀನಿವಾಸ್, ರಾಕೇಶ್, ಅಭಿಷೇಕ್ ಎಂಬವರನ್ನು ಬಂಧಿಸಿತ್ತು.
ಬಂಧಿತ ಆರೋಪಿಗಳ ವಿರುದ್ಧ ಐಪಿಎಸ್ ಸೆಕ್ಷನ್ 341, 323, 504ರಡಿ ಪ್ರಕರಣ ದಾಖಲಿಸಿ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ.
ಸೆ.26ರಂದು ದೇರಳಕಟ್ಟೆಯ ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಕೇರಳದ ವಿದ್ಯಾರ್ಥಿಗಳು ತನ್ನ ಜೀಪಿನಲ್ಲಿ

ಮಲ್ಪೆ ಮತ್ತು ಮಣಿಪಾಲಕ್ಕೆ ತೆರಳಿದ್ದರು. ಅದೇ ದಿನ ಸಂಜೆ ಸುಮಾರು 6:25ರ ವೇಳೆಗೆ ಮರಳಿ ಬರುತ್ತಿದ್ದಾಗ ಸುರತ್ಕಲ್-ಎನ್‌ಐಟಿಕೆ ಟೋಲ್‌ಗೇಟ್ ಬಳಿ ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡವು ಜೀಪಿನಲ್ಲಿದ್ದವರ ಹೆಸರು, ವಿಳಾಸ ಕೇಳಿ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ಬೈದು ದಾಂಧಲೆ ಸೃಷ್ಟಿಸಿತ್ತು.

ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಈ ಸಂದರ್ಭ ಅದೇ ದಾರಿಯಲ್ಲಿ ತೆರಳುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಶರೀಫ್ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದರು.

ಪ್ರಕರಣದ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.

LEAVE A REPLY

Please enter your comment!
Please enter your name here

Hot Topics