ಮಂಗಳೂರು: ‘ರಮಾನಾಥ ರೈ ರಾಜಕೀಯ ಪ್ರವೇಶಿಸುವ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನದು 50 ವರ್ಷ ರಾಜಕೀಯ ಜೀವನವಾಯಿತು. ಮೊದಲು ನಾನು ಮತ್ತು ರಮಾನಾಥ ರೈ ಒಟ್ಟಿಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದೆವು. ಬಂಟ್ವಾಳದ ನರನಾಡಿ ಎಲ್ಲಾನೂ ಗೊತ್ತಿದೆ. ರಮಾನಾಥ ರೈ ಈ ಸಲವೂ ಓಟಿನಲ್ಲಿ ಗೆಲ್ಲೋದಿಲ್ಲ’ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಸವಾಲೆಸೆದರು.
ಎರಡು ದಿನಗಳ ಹಿಂದೆ ಬಿಜೆಪಿಯವರು ನಾರಾಯಣ ಗುರುವಿಗೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಪತ್ರಿಕಾಗೋಷ್ಠಿ ಕರೆದು ದೂರಿದ್ದ ಹಿನ್ನೆಲೆ ಅವರಿಗೆ ಪ್ರತಿಕ್ರಿಯಿಸಲು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಜೆಪಿಯವರು ನಾರಾಯಣ ಗುರುವಿಗೆ ಅವಮಾನ ಮಾಡಿದ್ದಾರೆ ಎಂದು ರೈಯವರು ದೂರಿದ್ದಾರೆ.
ಇದು ಅವರ 2023ರ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಗೆ ಅನುಗುಣವಾಗಿ ಮಾತಾಡಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಮೊನ್ನೆ ನಡೆದ ರಾಜ್ಯಮಟ್ಟದ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಲು ಏನು ಕಾರಣ ಎಂಬುದನ್ನು ಉಸ್ತುವಾರಿ ಸಚಿವರೇ ಸ್ಪಷ್ಟಪಡಿಸಿದ್ದಾರೆ.
ಇವರ ಆಡಳಿತ ಇರುವ ಸಂದರ್ಭ ಕಾಟಾಚಾರಕ್ಕೆ 100 ಸಂಖ್ಯೆಯ ಒಳಗೆ ಜನರನ್ನು ಸೇರಿಸಿಕೊಂಡು ನಾರಾಯಣ ಗುರುಗಳ ಕಾರ್ಯಕ್ರಮವನ್ನು ಮಾಡಿದ್ದರು.
ಈ ರೀತಿ ನಾರಾಯಣ ಗುರುಗಳ ಕಾರ್ಯಕ್ರಮ ಮಾಡಿದ್ರೆ ಏನು ಪ್ರಯೋಜನ ಆಗುತ್ತೆ? ನಾರಾಯಣ ಗುರುಗಳಿಗೆ ಬಿಜೆಪಿಯಿಂದ ಅವಮಾನವಾಗುವಂತಹ ಸಂದರ್ಭ ಯಾವತ್ತೂ ಬರಲು ಸಾಧ್ಯವೇ ಇಲ್ಲ.
ನಾವು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ನಗರದ ಟಿಎಂಪೈ ಸಭಾಂಗಣದಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಆಚರಣೆ ಮಾಡಿದ್ದೇವೆ.
ಹಾಗಿದ್ದ ಮೇಲೆ ಬಿಜೆಪಿಯಿಂದ ಗುರುಗಳಿಗೆ ಹೇಗೆ ಅವಮಾನವಾದಂತಾಗುತ್ತದೆ ರೈಗಳೇ..?ಎಲ್ಲಿಯಾದ್ರೂ ನಾವುಗಳು ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದೇವಾ…?.
ಮೊನ್ನೆ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಹೆಸರು ಎತ್ತಿಲ್ಲ ಎಂಬ ಆರೋಪವನ್ನು ನೀವು ಮಾಡಿದ್ದೀರಿ.
ಆದ್ರೆ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ನಾರಾಯಣ ಗುರುಗಳ ಹೆಸರು ಹೇಳಿಯೇ ಭಾಷಣ ಆರಂಭ ಮಾಡಿದ್ದಾರೆ. ನಿಮಗೆ ಅನುಮಾನ ಇದ್ದರೆ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ವಿಡಿಯೋದ ಒಂದು ತುಣುಕು ತೆಗೆದು ನೋಡಿ ಎಂದು ಸವಾಲು ಎಸೆದರು.
ರಮಾನಾಥ ರೈ ಈ ಜನ್ಮದಲ್ಲಿ ಓಟಿನಲ್ಲಿ ಗೆಲ್ಲೋದಿಲ್ಲ. ಬೇಕಾದ್ರೆ ಬರೆದುಕೊಳ್ಳಿ, ನಾನು ಹೇಳಿದ ಟೈಮಿಂಗ್ಸ್ ಕೂಡಾ ಬರೆದಿಟ್ಟುಕೊಳ್ಳಿ. 15000 ಸಾವಿರಕ್ಕಿಂತ ಜಾಸ್ತಿ ಓಟಿನಲ್ಲಿ ರಮಾನಾಥ ರೈ ಗೆದ್ದರೆ ನಾನು ಸ್ವಯಂ ನಿವೃತ್ತಿ ಘೋಷಣೆ ಮಾಡ್ತೇನೆ. ನೀನು ಮಾಡ್ತೀಯಾ ಎಂದು ನಾನು ಯು.ಟಿ ಖಾದರ್ ಅವರಲ್ಲಿ ಆವತ್ತೇ ಹೇಳಿದ್ದೆ.
ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರು ಕೂಡಾ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಅವರನ್ನು ಸ್ವಾಗತಿಸಲು ಎಲ್ಲರೂ ತಯಾರಿ ನಡೆಸಿ ಎಂದು ಪೊಲೀಸ್ ಇಲಾಖೆ ಹೇಳಿದಾಗ ನಾವೂ ಕೂಡಾ ಎಲ್ಲಾ ಸಿದ್ಧತೆ ಮಾಡಿ ಕಾದು ಕೂತಿದ್ದರೂ ಸಿಎಂಗೆ ಗುಂಡು ತುಂಡು ಕೊಟ್ಟು ದೇವಸ್ಥಾನಕ್ಕೆ ಬಾರದೇ ಸೀದಾ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ನಿಮಗೆ ಅವಮಾನ ಆಗುತ್ತಿದೆ ಅಂತ ಅನಿಸಿಲ್ವಾ? ರೈ ಅವರೇ ‘ ಎಮದು ವ್ಯಂಗ್ಯವಾಗಿ ನುಡಿದರು.