ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.
ನಾನು ಹಿಂದೆಯೂ ತೆರಿಗೆ ಕಟ್ಟುತ್ತಾ ಬಂದಿದ್ದೇನೆ ಈಗಲೂ ತೆರಿಗೆ ಕಟ್ಟುತ್ತಿದ್ದೇನೆ.
ನನ್ನ ಆಸ್ತಿ ಹೆಚ್ಚಾಗಿದ್ದಾರೆ ಅದು ನನ್ನ ವ್ಯವಹಾರದಿಂದಲೇ ಎಂದು ಮಾಜಿ ಕಾರ್ಪೋರೇಟರ್ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಈ ಬಗ್ಗೆ ಸುರತ್ಕಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸುರತ್ಕಲ್ ಟೋಲ್
ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು
ಟೋಲ್ ರದ್ದು ಕುರಿತಂತೆ ಪ್ರಶ್ನಿಸಿದ್ದಕ್ಕೆ ನನ್ನನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.
ನಾನು ರಾಜಕೀಯಕ್ಕೆ ಬರುವಾಗ ಹೇಗಿದ್ದೆ, ಈಗ ಎಷ್ಟು ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು “ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ” ಹೆಸರಿನ ಪೇಜ್‌ನಲ್ಲಿ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದೆ.
ಅದರಲ್ಲಿ ಹೇಳಿದಂತೆ ಟೋಲ್ ಆಗಿದ್ದು ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದಾಗ ಅಲ್ಲ, ಬಿಜೆಪಿ ಸರಕಾರ ಮತ್ತದರ ಜನಪ್ರತಿನಿಧಿಗಳ ಅಕ್ರಮದ ಕೂಸು ಈ ಟೋಲ್ ಗೇಟ್.
ಇನ್ನು ನಾನು ಆಗ ಹೇಗಿದ್ದೀನೋ ಈಗಲೂ ಹಾಗೇ ಇದ್ದೇನೆ. ನನ್ನಲ್ಲಿ ಹಿಂದೆಯೂ ಮನೆ, ಕಾರು ಎಲ್ಲವೂ ಇತ್ತು. ನನ್ನ ತಂದೆ ಮಾಡಿರುವ ಅಸ್ತಿಯು ಇತ್ತು.
ನಾನು ಹಿಂದೆಯೂ ತೆರಿಗೆ ಕಟ್ಟುತ್ತಾ ಬಂದಿದ್ದೇನೆ ಈಗಲೂ ತೆರಿಗೆ ಕಟ್ಟುತ್ತಿದ್ದೇನೆ. ನನ್ನ ಆಸ್ತಿ ಹೆಚ್ಚಾಗಿದ್ದಾರೆ ಅದು ನನ್ನ ವ್ಯವಹಾರದಿಂದಲೇ ಎಂದರು.
ಸುರತ್ಕಲ್ ಬಿ.ಸಿ ರೋಡ್ ರಸ್ತೆಯನ್ನು ನಾಲ್ಕು ಪಥದ ಟೋಲ್ ರಸ್ತೆಯನ್ನಾಗಿಸುವ ಯೋಜನೆ ರೂಪುಗೊಂಡಾಗ ಸಂಸದರಾಗಿ ಇದ್ದದ್ದು ನಳಿನ್ ಕುಮಾರ್ ಕಟೀಲ್.
ಅಲ್ಲಿಂದ ಇಲ್ಲಿಯವರೆಗೂ ನಳಿನ್ ಕುಮಾರ್ ಕಟೀಲ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿದ್ದಾರೆ.
ಮೊದಲು ನವಮಂಗಳೂರು ಬಂದರು ಬಳಿ, ಆ ನಂತರ ಎನ್ಐಟಿಕೆ ಬಳಿ ಟೋಲ್ ಗೇಟ್ ನಿರ್ಮಿಸುವ ಪ್ರಸ್ತಾಪ ಸಿದ್ದಗೊಂಡಾಗ ಕ್ಷೇತ್ರದಲ್ಲಿ ಇದ್ದದ್ದು ಬಿಜೆಪಿ ಶಾಸಕರು.
ಎನ್ಐಟಿಕೆ ಬಳಿ ಟೋಲ್ ಗೇಟ್ ಸ್ಥಾಪಿಸುವಾಗ ಮೊಯ್ದಿನ್ ಬಾವ ಶಾಸಕರಾಗಿ ಇದ್ದದ್ದು ಹೌದು.
ಆದರೆ ಕೇಂದ್ರ ಸರಕಾರದ ಯೋಜನೆಯ ಭಾಗವಾದ ಟೋಲ್ ಗೇಟ್ ಎನ್ಐಟಿಕೆ ಬಳಿ ಸ್ಥಾಪನೆ ಆಗದಂತೆ ಶಾಸಕ ಮೊಯ್ದಿನ್ ಬಾವ ಹೋರಾಟ ನಿರತ ಸ್ಥಳೀಯರೊಂದಿಗೆ ಸೇರಿ
ಅವಿರತವಾಗಿ ಶ್ರಮಿಸಿದ್ದಾರೆ. ಕೊನೆಗೆ ನ್ಯಾಯಾಲಯ ಹಾಗೂ ನಾಗರಿಕರಿಗೆ “ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸಲಿದೆ.
ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾರಂಭಗೊಂಡ ನಂತರ ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲಾಗುವುದು” ಎಂದು ಕೋರ್ಟ್‌ಗೆ ಸ್ಪಷ್ಟನೆ ನೀಡಿ ಟೋಲ್ ಗೇಟ್ ಕಾರ್ಯಾರಂಭ ಮಾಡಲಾಯಿತು.
ಆ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಜನರ ಜೊತೆ ನಿಂತಿದ್ದರೆ ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಗೊಳ್ಳಲು ಸಾಧ್ಯವೇ ಇರಲಿಲ್ಲ.
ಕೇಂದ್ರ ಸರಕಾರದ ಹೆದ್ದಾರಿಗೆ ಸಂಬಂಧ ಪಟ್ಟ ವಿಷಯ ಸಂಸದರ ಜವಾಬ್ದಾರಿ ಆಗಿದ್ದರೂ ನಳಿನ್ ಕುಮಾರ್ ಕಟೀಲ್ ಜನರ ಜೊತೆ ನಿಲ್ಲದೆ ಟೋಲ್ ಗೇಟ್ ಲಾಬಿ ಜೊತೆ ನಿಂತರು.
ಟೋಲ್ ಗೇಟ್ ಸ್ಥಾಪನೆಯ ವಿರುದ್ದ ಹೋರಾಟ ಆರಂಭಿಸಿದ್ದು ಸುರತ್ಕಲ್ ನಾಗರಿಕ ಸಮಿತಿ ಹೊರತು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಲ್ಲ.
ಅಂದು ನಾಗರಿಕ ಸಮಿತಿ ಕೈಯಿಂದ ಖರ್ಚು ಮಾಡಿ ಟೋಲ್ ಸ್ಥಾಪನೆ ತಡೆಯಲು ಕೈಲಾದ ಕೆಲಸ ಮಾಡಿದೆ.
ಆ ನಂತರ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದೆ.
ಇದೆಲ್ಲದರ ಅರಿವಿಲ್ಲದೆ ಹಣಕಾಸು ವಿಚಾರದಲ್ಲಿ ಆರೋಪ ಮಾಡಿ ಶಾಸಕ ಭರತ್ ಶೆಟ್ಟಿ ತನ್ನ ಯೋಗ್ಯತೆಯನ್ನು ಬಯಲು ಮಾಡಿದ್ದಾರೆ.
ಬಿಜೆಪಿ ಯುವಮೋರ್ಚಾ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಜನರನ್ನು ಮಂಗ ಮಾಡೋ ಬದಲು ತನ್ನ ಶಾಸಕರನ್ನು ಸಂಸದರನ್ನು ಪ್ರಶ್ನೆ ಮಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ.