ಮಂಗಳೂರು: ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರ ಮಧ್ಯೆ ಸುಮಾರು 40 ಗಂಟೆ ಜೀವ ಕೈಲಿ ಹಿಡಿದು ಕುಳಿತ್ತಿದ್ದ ಕೋರಮಂಡಲ್ ಟಗ್ನ ಎಲ್ಲಾ 9 ಸಿಬ್ಬಂದಿಯನ್ನೂ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ. ಅವರನ್ನು ನವಮಂಗಳೂರು ಬಂದರು ಮಂಡಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಎಲ್ಲಾ 9 ಮಂದಿಯೂ ಕಡಲಿನ ಅಲೆಗಳ ಹೊಡೆತಕ್ಕೆ ಸಿಲುಕಿ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದು, ಇದೀಗ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
ಮೊದಲು ಅವರ ಚೇತರಿಕೆಗೆ ಆದ್ಯತೆ ನೀಡಲಾಗಿದೆ. ಅವರು ಚೇತರಿಸಿಕೊಂಡ ಬಳಿಕ ಈ ಘಟನೆಗೆ ಮೂಲ ಕಾರಣವೇನು ಎನ್ನುವುದನ್ನು ಹಿರಿಯ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಸಂತ್ರಸ್ತರನ್ನು 24 ಗಂಟೆಗಳ ಕಾಲ ನಿರಂತರ ನಿಗಾದಲ್ಲಿ ಇರಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.
ಮೊದಲು ಇವರೆಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ರೋಗಿಗಳು ದಾಖಲಾಗಿರುವ ಎನ್ಎಂಪಿಟಿ ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು,ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಭರತ್ ಶೆಟ್ಟಿ ಮೊದಲಾದವರು ಭೇಟಿ ನೀಡಿದರು. ಇದೇ ವೇಳೆ ಎನ್.ಎಂಪಿಟಿ ಅಧ್ಯಕ್ಷ ಡಾ. ವೆಂಕಟ್ರಮಣ ಅಕ್ಕರಾಜು ಭೇಟಿ ನೀಡಿ, ರೋಗಿಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಅಲ್ಲದೆ ಆಸ್ಪತ್ರೆಯ ಸೂಕ್ತ ವ್ಯವಸ್ಥೆಗಳನ್ನು ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದರು. ಇಂಡಿಯನ್ ಕೋಸ್ಟ್ಗಾರ್ಡ್ ಮತ್ತು ಇಂಡಿಯನ್ ನೇವಿ ಜಂಟಿ ಕಾರ್ಯಾಚರಣೆ ಮೂಲಕ ಎಲ್ಲಾ 9 ಮಂದಿ ಸಿಬ್ಬಂದಿಗಳನ್ನು ಇಂದು ಬೆಳಿಗ್ಗೆ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ…