ಮಂಗಳೂರು : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪದ ಹತ್ತನೇ ತೋಕೂರು ಬಳಿ ಸಂಭವಿಸಿದೆ.
ನಿನ್ನೆ ರಾತ್ರಿ ಪೂರ್ತಿ ಮಳೆ ಸುರಿಯುತ್ತಿದ್ದರಿಂದ ಇಲ್ಲಿನ ಓಂಕಾರೇಶ್ವರಿ 2ನೇ ಅಡ್ಡರಸ್ತೆಯಲ್ಲಿ ಶೋಭಾ ಎಂಬುವವರ ಮನೆಯಲ್ಲಿ ಇಂದು ಮುಂಜಾನೆ ಸುಮಾರು 4:30, ರ ವೇಳೆಗೆ ಮನೆಮಂದಿ ಮಲಗಿದ್ದ ಸಮಯದಲ್ಲಿ ಮನೆಯ ಹಂಚುಗಳು ಬೀಳುತ್ತಿದ್ದ ಶಬ್ದಗಳಗೆ ಎಚ್ಚೆತ್ತು ಬೆಳಕು ಹಾಕಿ ನೋಡುವಾಗ ಮನೆಯ ಹಂಚು- ಪಕ್ಕಾಸುಗಳು ಒಂದೊಂದೇ ಶಿಥಿಲಗೊಂಡು ಕೆಳಗೆ ಬೀಳುತ್ತಿರುವುದನ್ನು ಕಂಡು ಭಯಬೀತರಾದ ಕುಟುಂಬ ತಕ್ಷಣವೇ ಮಕ್ಕಳೂಂದಿಗೆ ಹೊರಗೆ ಬರುತ್ತಿದ್ದ ಸಂದರ್ಭ ಒಂದೇ ಬಾರಿ ಮನೆಯ ಭಾಗಶಃ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿಯನ್ನು ರಕ್ಷಿಸುವಷ್ಟರಲ್ಲಿ ಸುಮಾರು 70 ವರ್ಷ ಪ್ರಾಯದ ಉಮ್ಮಕ್ಕ ಎಂಬ ಮಹಿಳೆಯ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡರು.
ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ತಕ್ಷಣವೇ ಮುಲ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಇತ್ತ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ವಾಸದ ಮನೆ ಇಲ್ಲದೆ ಕುಟುಂಬ ಸಂತ್ರಸ್ತರಾಗಿದ್ದಾರೆ, ಅವಘಡದಿಂದಾಗಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ, ಗ್ರಾಮಕರಣಿಕ ಮೋಹನ್ ಸಹಾಯಕ ಪುರುಷೋತ್ತಮ್ ಸ್ಥಳಕ್ಕಾಗಮಿಸಿ ವರದಿ ಸಂಗ್ರಹಿಸಿರುತ್ತಾರೆ, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಸದಸ್ಯರುಗಳಾದ ಮೋಹನ್, ಅನಿಲ್ ಸೀತಾರಾಮ್, ಜ್ಯೋತಿ ಕುಲಾಲ್, ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.