ಉಡುಪಿ: ಪತಿಗೆ ರಕ್ತ ಕೊಡಿಸಲು ಆರ್ಥಿಕ ಸಮಸ್ಯೆ ಎದುರಿಸಿದ ಮಹಿಳೆಯ ಸಂಕಷ್ಟ ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ರಕ್ತದಾನದ ಬಗ್ಗೆ ದೇಶ ಸುತ್ತಿ ಅರಿವು ಮೂಡಿಸಲು ಹೊರಟು ನಿಂತಿದ್ದಾರೆ.
ದೆಹಲಿಯ ನಿವಾಸಿ ಕಿರಣ್ ವರ್ಮಾ ದೇಶಾದ್ಯಂತ ಅರಿವು ಮೂಡಿಸಲು ಹೊರಟ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 28 ರಂದು ಕೇರಳದ ತಿರುವನಂತಪುರದಿಂದ ಪಾದಯಾತ್ರೆ ಆರಂಭಿಸಿ ಇವರು ಈವರೆಗೆ ಸುಮಾರು 750 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಏಕಾಂಕಿಯಾಗಿ ದೇಶ ಸುತ್ತಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿರುವ ಇವರನ್ನು ಶ್ಲಾಘಿಸಲೇಬೇಕು.
ಎಲ್ಲಾ ಜಿಲ್ಲೆಗಳಲ್ಲಿ ಬ್ಲಡ್ ಡೊನೇಟ್ ಕ್ಯಾಂಪ್ ನಡೆಸುವ ಸಂಸ್ಥೆಯನ್ನು ಸಂಪರ್ಕಿಸಿ ರಕ್ತದಾನ ಶಿಬಿರವನ್ನು ಕೂಡ ನಡೆಸಿದ್ದಾರೆ.
ಹೀಗೆ ಹೋದಲೆಲ್ಲ ರಕ್ತದಾನ ಅರಿವು ಮೂಡಿಸಿ ಪ್ರತೀ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಹೆಚ್ಚು ಮಾಡುವುದರ ಮೂಲಕ ರಕ್ತದ ಲಭ್ಯತೆ ಆಗಬೇಕೆನ್ನುವ ಉದ್ದೇಶ ಕಿರಣ್ ವರ್ಮಾರದ್ದು. ಒಂದು ಉತ್ತಮ ಧ್ಯೇಯವನ್ನಿಟ್ಟುಕೊಂಡು ಹೃದಯ ವೈಶಾಲ್ಯತೆ ಮೆರೆದಿರುವ ಕಿರಣ್ ಅವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ.
ಸದ್ಯ ಉಡುಪಿ ತಲುಪಿರುವ ಕಿರಣ್ ಇನ್ನು ಮುಂದೆ 20ಸಾವಿರ ಕಿಲೋಮೀಟರ್ ಪಾದಯಾತ್ರೆಯನ್ನು ಎರಡು ವರ್ಷಗಳಲ್ಲಿ ಮುಗಿಸುವ ಗುರಿಯನ್ನ ಹೊಂದಿದ್ದಾರೆ.
ಜೂನ್ 14, 2024 ರಂದು ವಿಶ್ವ ರಕ್ತದಾನಿಗಳ ದಿನ ಇರುವ ಕಾರಣ ಅಂದು ನನ್ನ ರಕ್ತದಾನ ಅರಿವು ಪಾದಯಾತ್ರೆ ಮುಗಿಸಲಿದ್ದೇನೆ ಎಂದು ಕಿರಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಡನಿಗೆ ರಕ್ತ ಕೊಡಿಸಲು ಕಷ್ಟ ಪಡುತ್ತಿರುವ ಮಹಿಳೆಯ ಪರಿಸ್ಥಿತಿ ನೋಡಿ ಬೇಸರ ಪಟ್ಟ ಕಿರಣ್ ಇಂತಹ ಕಾರ್ಯಕ್ಕೆ ಇಳಿದಿರುವುದು ನಿಜಕ್ಕೂ ಒಂದು ರೀತಿಯ ಸಾಧನೆ ಎನ್ನಬಹುದು.