ಬೆಂಗಳೂರು: ಕರ್ನಾಟಕದ ರಾಜ್ಯದ ಕರಾವಳಿ ಭಾಗದಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಜೂನ್ 14ರವರೆಗೂ ಅಂದ್ರೆ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ ಮೊದಲ ವಾರದಲ್ಲಿಯೇ ನೈಋತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸಿತ್ತು. ಇನ್ನು ಮಹಾರಾಷ್ಟ್ರ ಕರಾವಳಿ ತೀರದಿಂದ ರಾಜ್ಯದ ಕರಾವಳಿ ತೀರದವರೆಗೂ ಮೇಲ್ಮೈ ಸುಳಿಗಾಳಿ ಹಾದು ಹೋಗಲಿದ್ದು, ಇದರ ಪರಿಣಾಮ ಇಂದಿನಿಂದ 5 ದಿನಗಳ ಕಾಲ ಕರಾವಳಿ ಪ್ರದೇಶಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುವ ಲಕ್ಷಣವಿದೆ. ಅದೇ ರೀತಿ ಕಾರವಾರ, ತೀರ್ಥಹಳ್ಳಿ, ಸಾಗರ, ಕೊಪ್ಪ, ಭಟ್ಕಳ, ಅಂಕೋಲಾ, ಹೊನ್ನಾವರ, ಕುಮಟಾ, ಶಿರಸಿ ಮುಂತಾದೆಡೆ ನಿನ್ನೆಯಿಂದಲೇ ಮಳೆಯಾಗುತ್ತಿದ್ದು, ಜೂನ್ 14ರ ತನಕವೂ ಮಳೆ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.