ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿಯಾಗಿರುವ ಆಶಾ, ಎಂಟು ವರ್ಷಗಳ ಹಿಂದೆ ಮಳವಳ್ಳಿಯ ನಾಗಪ್ರಸಾದ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದರು.
ಮದುವೆ ನಂತರ ಮೈಸೂರಿನ ಜೆ.ಪಿ.ನಗರದಲ್ಲಿ ದಂಪತಿ ವಾಸವಾಗಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ಆಶಾ, ಚಿನ್ನದ ಪದಕ ಪಡೆದಿದ್ದರು. ಮೈಸೂರು ವಿವಿಯಲ್ಲಿ ಬಂಗಾರ ಪದಕ ಪಡೆದಿದ್ದ ಆಶಾ ಪ್ರೀತಿಸಿ ಮದುವೆಯಾಗಿದ್ದರೂ ಕೂಡ ಹಣ ತೆಗೆದುಕೊಂಡು ಬರುವಂತೆ ಆಶಾಳಿಗೆ ನಾಗಪ್ರಸಾದ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಈ ಬಗ್ಗೆ ಎರಡು ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ ಡಿವೋರ್ಸ್ ಹಂತಕ್ಕೆ ಪ್ರಕರಣ ತಲುಪಿತ್ತು. ಆದರೆ ಕುಟುಂಬ ನ್ಯಾಯಾಲಯದಲ್ಲಿ ಅವರಿಬ್ಬರಿಗೆ ರಾಜಿ ಮಾಡಿಸಲಾಗಿತ್ತು.
ಇದಾದ ಮೇಲು ಗಂಡನ ಧನದಾಹ ನಿಲ್ಲಲಿಲ್ಲ. ಹಣಕ್ಕಾಗಿ ದಿನೇ ದಿನೇ ಟಾರ್ಚರ್ ಕೊಡುತ್ತಿದ್ದ. ನಿನ್ನೆ ಬೆಳಗ್ಗೆಯಷ್ಟೇ ಗಂಡನ ಮನೆ ಬಿಟ್ಟು ಪಿಜಿಯಲ್ಲಿರುತ್ತೇನೆ ಎಂದು ಹೇಳಿದ್ದ ಆಶಾ, ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಶಾ ಕುಟುಂಬಸ್ಥರಿಗೆ ನಾಗಪ್ರಸಾದ್ ವಿಷಯ ಮುಟ್ಟಿಸಿದ್ದಾನೆ.
ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆಶಾ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ನಾಗಪ್ರಸಾದ್ ವಿರುದ್ಧ ದೂರು ನೀಡಿದ್ದಾರೆ.