ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಭೂಮಿಪೂಜೆ ನೆರವೇರಿಸಿದರು.
ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟ ಮಾತಿನಂತೆ ಪ್ರವೀಣ್ ಕುಟುಂಬದ ಸಹಕಾರಕ್ಕೆ ನಿಂತಿದ್ದು , ಇಂದು ಬೆಳಗ್ಗೆ 9.30ಕ್ಕೆ ದಿ.ಪ್ರವೀಣ್ ಕನಸಿನ ಮನೆಗೆ ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ 2.700 ಚ.ಅಡಿಯ ನೂತನ ಮನೆ ನಿರ್ಮಾಣಕ್ಕೆ ಅವರ ಮನೆಯವರ ಜೊತೆ ಗುದ್ದಲಿ ಪೂಜೆ ನೆರವೇರಿಸಿದರು.
ಮೊಗರೋಡಿ ಕನ್ಸ್ ಸ್ಟ್ರೆಕ್ಷನ್ ಕಂಪನಿಗೆ ಮನೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ‘ಪ್ರವೀಣ್ ನಮ್ಮ ಕಾರ್ಯಕರ್ತನಾಗಿದ್ದ. ಅವನ ಕನಸಾದ ಮನೆಯನ್ನು ನಿರ್ಮಿಸಲು ಬಿಜೆಪಿ ಪಕ್ಷ ಅಂದೇ ತೀರ್ಮಾನಿಸಿತ್ತು.
ಸರಕಾರದಿಂದ ಪ್ರವೀಣ್ ಕುಟುಂಬಕ್ಕೆ 25 ಲಕ್ಷ, ಬಿಜೆಪಿ ಪಕ್ಷದ ವತಿಯಿಂದ 25 ಲಕ್ಷ ಮತ್ತು ಯುವಮೋರ್ಚಾ ವತಿಯಿಂದ 15 ಲಕ್ಷ ರೂಪಾಯಿ ಈಗಾಗಲೇ ನೀಡಲಾಗಿದೆ.
ಪತ್ನಿಗೆ ಸರಕಾರಿ ಉದ್ಯೋಗವನ್ನೂ ನೀಡಲಾಗಿದೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಪ್ರಕರಣದ ಮುಂದಿನ ಭಾಗವಾಗಿ ಪಿಎಫ್ಐ ಸಂಘಟನೆಯನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ.
ಹತ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದವರನ್ನೂ ಬಿಡಬಾರದು ಎಂದು ಸರಕಾರ ನಿರ್ಧರಿಸಿದೆ. ನಾಲ್ವರು ಆರೋಪಿಗಳ ವಿರುದ್ಧ ಎನ್.ಐ.ಎ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ. ಹತ್ಯೆಯ ಹಿಂದಿರುವ ಎಲ್ಲರನ್ನೂ ಬಂಧಿಸಲಾಗುವುದು’ ಎಂದು ಹೇಳಿದರು.
ಇನ್ನು ದಿ. ಪ್ರವೀಣ್ ನೆಟ್ಟಾರು ಪತ್ನಿ ಮಾತನಾಡಿ ‘ಪ್ರವೀಣ್ ಕನಸಿನ ಮನೆಗೆ ಇಂದು ಬಿಜೆಪಿ ಪಕ್ಷದ ಕಾರ್ಯಕರ್ತರು, ರಾಜಕೀಯ ಮುಖಂಡರು, ಸಂಸದರು ಬೆಂಗಾವಲಾಗಿ ನಿಂತು ಸಹಕರಿಸಿದ್ದಾರೆ. ನಮಗೆ ಸಹಕರಿಸಿದ ಎಲ್ಲರಿಗೂ ಕೂಡಾ ನಮ್ಮ ಮನೆಯವರ ಪರವಾಗಿ ಧನ್ಯವಾದ ಹೇಳ್ತೇನೆ.
ಇನ್ನು ನನ್ನ ಪ್ರಮುಖ ಮನವಿ ಏನು ಕೇಳಿದ್ರೆ ಇದೇ ರೀತಿ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಶಿಕ್ಷೆ ನೀಡುವಲ್ಲಿ ಕೂಡಾ ಇವರ ಇದೇ ರೀತಿ ಬೆಂಬಲ ನಮಗಿರಬೇಕು. ಇನ್ನು ಕೂಡಾ 6ಜನ ಸಿಗ್ಲಿಕ್ಕೆ ಬಾಕಿ ಇದೆ. ಅದಕ್ಕೂ ಸಹಕಾರವಿರಲಿ ಅನ್ನೋದು ನಮ್ಮ ಮನೆಯವರ ಅಭಿಪ್ರಾಯ ಕೂಡಾ ಹೌದು’ ಎಂದು ನುಡಿದರು.
ಈ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಎಸ್.ಅಂಗಾರ ಶಾಸಕ ಸಂಜೀವ ಮಠಂದೂರು, ಪ್ರವೀಣ್ ಪತ್ನಿ ನೂತನ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.