ಮಂಗಳೂರು: ದ.ಕ. ಜಿಲ್ಲಾದ್ಯಂತ ಇಂದು ಶನಿವಾರ ಮತ್ತು ರವಿವಾರ ದಿನವಿಡೀ ವಾರಾಂತ್ಯ ಕರ್ಫ್ಯೂ ಇರಲಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಕರ್ಪ್ಯೂ ಆರಂಭಗೊಂಡಿದೆ. ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಔಷಧಿ ಅಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ, ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.
ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24×7 ಕಾರ್ಯಾಚರಣೆಗಳ ಅಗತ್ಯವಿರುವ ಕೈಗಾರಿಕೆಗಳು/ಕಂಪನಿಗಳು/ಸಂಸ್ಥೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದಲ್ಲಿ ಕಾಮಗಾರಿ ನಡೆಸಬಹುದಾಗಿದೆ.ರೋಗಿಗಳು ಮತ್ತು ಅವರ ಪರಿಚಾರಕರು/ವೈದ್ಯಕೀಯ ತುರ್ತು ಸಂದರ್ಭ ಜನರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿಸಲಾಗಿದೆ.
ಮೇ 8 ಮತ್ತು 9ರಂದು ನಿಗಧಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ಸರಕಾರದ ಮಾರ್ಗಸೂಚಿಯಂತೆ ಜನರ ಪರಿಮಿತಿಗೊಳಪಟ್ಟು ಕೋವಿಡ್-19 ನಿಯಮ ಪಾಲಿಸಿ ನಡೆಸಲು ಅನುಮತಿ ನೀಡಲಾಗಿದೆ.
ಶವಸಂಸ್ಕಾರ /ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರ ಪರಿಮಿತಿಗೊಳಪಟ್ಟು ಕೋವಿಡ್-19 ನಿಯಮ ಪಾಲಿಸಿ ನಡೆಸಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.