ಮಂಗಳೂರು: ಕಾಲೇಜು ಆಡಳಿತಕ್ಕೆ ಸಂಬಂಧಿಸಿದಂತೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೆ ವಿದ್ಯಾರ್ಥಿಗಳು ತಲೆಬಾಗಬೇಕು.
ಸಿಂಡಿಕೇಟ್ ನಿರ್ಧಾರಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಮಕ್ಕಳಿಗೆ ಮನವರಿಕೆ ಮಾಡಿದ್ದೇನೆ ಎಂದು ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನ ನಗರದ ವಿವಿ ಕಾಲೇಜಿನಲ್ಲಿ ಶುರುವಾಗಿರುವ ಹಿಜಾಬ್ ವಿವಾದ ಸದ್ಯ ಬಗೆಹರಿಯುವಂತೆ ಕಾಣುತ್ತಿಲ್ಲ.
ಹಿಜಾಬ್ ಧರಿಸಿ ಇಂದು ಕಾಲೇಜಿಗೆ ಬಂದಿದ್ದ 12 ಮಂದಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶವಿಲ್ಲ ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಬೇರೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಧ್ಯಾಹ್ನದ ವೇಳೆ ಕಚೇರಿಗೆ ಬಂದರು. ಈ ವೇಳೆ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿನಿಯರ ಅಹವಾಲು ಕೇಳಿದ ಜಿಲ್ಲಾಧಿಕಾರಿ ಸಿಂಡಿಕೇಟ್ ಸಭೆಯ ನಿರ್ಧಾರಗಳನ್ನು ಜಿಲ್ಲಾಡಳಿತ ಪ್ರಶ್ನಿಸಲು ಸಾಧ್ಯವಿಲ್ಲ.
ಈ ವಿಷಯವನ್ನು ಕಾನೂನಿನ ಆಯಾಮದಿಂದಲೂ ನೊಡಬೇಕು. ಜೊತೆಗೆ ಕಾಲೇಜು ಆವರಣದಲ್ಲಿ ಶಾಂತಿಭಂಗ ಆಗಬಾರದೆಂದು ತಿಳಿ ಹೇಳಿದರು.
ಬಳಿಕ ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಆಗಮಿಸಿದ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಜಾಬ್‌ಧಾರಿ ವಿದ್ಯಾರ್ಥಿನಿ ಗೌಸಿಯಾ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೆವು, ಆದರೆ ಅವರ ಮಾತಿನಲ್ಲಿ ಅಸಹಾಯಕತೆ ಇತ್ತು.
ಸಿಂಡಿಕೇಟ್ ಸಭೆಯಲ್ಲಿ ಆದೇಶವಾಗಿದೆ, ಹೀಗಾಗಿ ಡಿಸಿಗೆ ಏನು ಮಾಡಲು ಆಗಲ್ಲ ಅಂತ ಗೊತ್ತಾಯ್ತು.
ನಿಮ್ಮತ್ರ ದಾಖಲೆ ಇದ್ರೆ ಕಾನೂನು ಹೋರಾಟ ಮಾಡಿ ಅಂದಿದ್ದಾರೆ. ಕರ್ನಾಟಕದ ಹಿಜಾಬ್ ವಿವಾದಕ್ಕೂ ಮಂಗಳೂರು ವಿವಿ ಕಾಲೇಜಿನ ವಿವಾದಕ್ಕೂ ಸಂಬಂಧ ಇಲ್ಲ. ಸಿಂಡಿಕೇಟ್ ಆದೇಶ ಎಬಿವಿಪಿ ಒತ್ತಡದಿಂದ ಆದ ಆದೇಶದಂತಿದೆ.
ಪ್ರತಿಭಟನೆ ಬಳಿಕವೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ಎಬಿವಿಪಿ ಒತ್ತಡ ಬಿಟ್ರೆ ಇದರಲ್ಲಿ ಹೈಕೋರ್ಟ್ ಆದೇಶ ಪಾಲನೆ ಕಾಣುತ್ತಿಲ್ಲ. ನಾವು ಕೇಳೋದು, ಎಬಿವಿಪಿ ಒತ್ತಡ ಮುಖ್ಯವಾ? ನಮ್ಮ ಶಿಕ್ಷಣ ಮುಖ್ಯವಾ?.
ಇದು ಮಂಗಳೂರು ವಿವಿಯಲ್ಲಿ ಮುಗಿಯುವ ವಿಷಯ ಅಲ್ಲ, ನಾವು ಯು.ಟಿ.ಖಾದರ್ ಅವರ ಬಳಿಯೂ ಹೋಗಿದ್ದೆವು, ಅವರು ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.