DAKSHINA KANNADA
ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಪಡೆದ ಹೆಚ್ಚುವರಿ 3.69 ಲಕ್ಷ ರೂ ಹಣ ಹಿಂದಿರುಗಿಸಲು ಡಿಸಿ ಸೂಚನೆ
ಮಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಏಳು ಖಾಸಗಿ ಆಸ್ಪತ್ರೆಗಳು ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಹೆಚ್ಚುವರಿ ಹಣ ಪಡೆದಿರುವ ಬಗ್ಗೆ ಹಾಗೂ ಯೋಜನೆಯಡಿ ಚಿಕಿತ್ಸೆಗೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಸಂತ್ರಸ್ತರಿಗೆ ಕೂಡಲೇ ಹಣ ಹಿಂದಿರುಗಿಸಲು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಂತ್ರಸ್ತರು ದಾಖಲಿಸಿದ್ದ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ವಾರದೊಳಗೆ ರೋಗಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ, ಸ್ವೀಕೃತಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಆದೇಶಿಸಿದರು. ಈ ಕುರಿತು ಕುಂದುಕೊರತೆ ಪರಿಹಾರ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ಕುಮಾರ್ ಅವರು, ಏಳು ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಒಟ್ಟು 3.69 ಲಕ್ಷ ರೂ ಕೂಡಲೇ ಹಿಂದಿರುಗಿಸುವಂತೆ ಸೂಚಿಸಿದ್ದಾರೆ.
ಒಂದು ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಅದಕ್ಕಾಗಿ 1.50 ಲಕ್ಷ ರೂ ಮರುಪಾವತಿಸುವಂತೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಆದೇಶಿಸಿದೆ. ಜೊತೆಗೆ ಜಿಲ್ಲೆಯ ಎಲ್ಲ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ರೋಗಿಗಳು ಹಣ ಪಾವತಿ ಮಾಡುವಾಗ ಬಿಲ್ ಪಡೆದುಕೊಳ್ಳುವಂತೆ ಆಸ್ಪತ್ರೆಯ ವಿಚಾರಣಾ ಕೌಂಟರ್ ಹಾಗೂ ಬಿಲ್ಲಿಂಗ್ ಕೌಂಟರ್ ಹಾಗೂ ವಾರ್ಡ್ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದರು.
DAKSHINA KANNADA
ಮಂಗಳೂರು: 14.33% ಮತದಾರರಿಂದ ಮತ ಚಲಾವಣೆ
ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 14.33 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.
DAKSHINA KANNADA
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮುಂಜಾನೆ ಏಳುಗಂಟೆಗೆ ಮತಗಟ್ಟೆಗೆ ಆಗಮಿಸಿದ ಪದ್ಮರಾಜ್ ಅವರು ಬರುವ ವೇಳೆಗೆ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಪದ್ಮರಾಜ್ ಹಾಗೂ ಅವರ ಪತ್ನಿ ಮತ್ತು ಮಗಳು ಸರತಿ ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ್ದಾರೆ. ಪದ್ಮರಾಜ್ ಆಗಮಿಸುವ ವೇಳೆ ಅವರ ಸಾಕಷ್ಟು ಅಭಿಮಾನಿಗಳು ಮತಗಟ್ಟೆಯ ಹೊರಗೆ ನಿಂತು ಅವರಿಗೆ ಶುಭ ಕೋರಿದ್ದಾರೆ.
ಮತದಾನ ಮಾಡಿದ ಪದ್ಮರಾಜ್ ಬಳಿಕ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದಾರೆ.