ಮಂಗಳೂರು : ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದು ಲಾಕ್ ಡೌನ್ ಅನ್ ಲಾಕ್ ಆಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಾತ್ರ ತನ್ನ ವೇಗವನ್ನು ಕಡಿಮೆಗೊಳಿಸಿಲ್ಲ ಬದಲಾಗಿ ಜಿಲ್ಲೆಯಲ್ಲಿ ದಿನವೂ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಗಳು ಹೆಚ್ಚಾಗ್ತಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು( ಸೋಮವಾರ) ಕೂಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಆರು ಮಂದಿ ಬಲಿಯಾಗಿದ್ದು, ಈವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 983 ಕ್ಕೆ ಏರಿಕೆಯಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ 648 ಮಂದಿಗೆ ಕೊರೋನಾ ಪಾಸಿಟಿವ್ ಇಂದು ಧೃಡಪಟ್ಟಿದೆ. ಜಿಲ್ಲಾಡಳಿತ ನೀಡಿದ ಅಧಿಕೃತ ಮಾಹಿತಿಯಂತೆ ಜಿಲ್ಲೆಯ ಪಾಸಿಟಿವಿಟಿ ರೇಟ್ 8.51% ಆಗಿದೆ. ಇದೇ ಸಂದರ್ಭ 707 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 84,393 ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 6,954 ಆಕ್ವೀವ್ ಕೇಸ್ ಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಈ ಮಧ್ಯೆ ಹೆಚ್ಚುತ್ತಿರುವ ಕೊರೊನಾಕ್ಕೆ ಬ್ರೇಕ್ ಹಾಕಲು ಇಂದಿನಿಂದ ಜಿಲ್ಲೆಯ 17 ಗ್ರಾಪಂಗಳನ್ನು 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ದ.ಕ.ಜಿ.ಪಂ ಸಿಇಒ ಅವರ ವರದಿ ಆಧರಿಸಿ 50ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾಪಂಗಳನ್ನು ಸೀಲ್ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಅದರಂತೆ ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ ಮುಂದಿನ ಒಂದು ವಾರಗಳ ಕಾಲ ಸೀಲ್ ಡೌನ್ ಆಗಿವೆ.
ಅದಲ್ಲದೆ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸಹಿತ 17 ಗ್ರಾಪಂಗಳು ಸೀಲ್‌ಡೌನ್ ಆಗಿವೆ .
ಈ 17 ಗ್ರಾಪಂಗಳಿಗೆ ಹೊರಗಿನಿಂದ ಬರುವವರು ಮತ್ತು ಅಲ್ಲಿಂದ ಹೊರಗೆ ಹೋಗುವವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಅಲ್ಲದೆ ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ಇತ್ಯಾದಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಮತ್ತು ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ.
ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮಪಡೆಗಳು ಕ್ರಮ ವಹಿಸಲಿದ್ದಾರೆ. ಕೊರೋನ ಸೋಂಕು ತಗ್ಗಿಸಲು ಕೆಲವು ಕಠಿಣ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದ್ದು, ನಾಗರಿಕರು ಸಹಕರಿಸಬೇಕು ಎಂದು ಜಿಪಂ ಸಿಇಒ ಡಾ.ಕುಮಾರ್ ಮನವಿ ಮಾಡಿದ್ದಾರೆ.