ಪೂನಾ: ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುವ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಲಂಡನ್‌ಗೆ ತೆರಳಿ ಕೆಲ ದಿನಗಳಾಗಿವೆ.ಭಾರತದಲ್ಲಿ ತಮಗೆ ಮತ್ತು ಕುಟುಂಬದವರಿಗೆ ನಿರಂತರ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ತಾವು ಲಂಡನ್‌ಗೆ ತೆರಳಿರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದೀಗ ಕೊಲೆ ಬೆದರಿಕೆಯ ಕರೆಗಳು ಇನ್ನೂ ಮುಂದುವರಿದಿದ್ದು, ಪೂನಾವಾಲಾ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ವಕೀಲರೊಬ್ಬರು ಮೊರೆ ಹೋಗಿದ್ದಾರೆ.
ಮುಖ್ಯಮಂತ್ರಿ ಮತ್ತು ಕೆಲವು ಪ್ರಭಾವಿಗಳಿಂದ ತಮ್ಮ ಜೀವಕ್ಕೆ ಅಪಾಯವಿರುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಯಾರ ಹೆಸರನ್ನೂ ಅವರು ಬಹಿರಂಗಪಡಿಸಿರಲಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಪೂನಾವಾಲಾ ಅವರು ನೀಡಿರುವ ಈ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಉಲ್ಲೇಖಿಸಿರುವ ಮುಂಬೈ ಮೂಲದ ವಕೀಲ ದತ್ತ ಮಾನೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲು ಮಾಡಲು ಆದೇಶಿಸುವಂತೆ ಕೋರಿದ್ದಾರೆ.
‘ತಮಗೆ ಬೆದರಿಕೆ ಇರುವ ಕುರಿತು ಪೂನಾವಾಲಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ನನಗೆ ಆಘಾತ ಮತ್ತು ಆಶ್ಚರ್ಯವಾಗಿದೆ. ಕೋಟ್ಯಂತರ ಮಂದಿಯ ಜೀವ ಕಾಪಾಡುತ್ತಿರುವ ಈ ಲಸಿಕೆಯ ಉತ್ಪಾದಕರಿಗೆ ಈ ರೀತಿಯಾದರೆ ಅದು ಲಸಿಕೆ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು.
ಅವರು ಉತ್ಪಾದನಾ ಘಟಕದಿಂದ ದೂರವೇ ಉಳಿದರೆ ಅದು ಕ್ಯಾಪ್ಟನ್ ಇಲ್ಲದೆ ಚಂಡಮಾರುತದಲ್ಲಿ ಸಿಲುಕಿದ ಹಡಗಿನಂತೆ ಆಗುತ್ತದೆ’ ಎಂದು ಅರ್ಜಿಯಲ್ಲಿ ವಕೀಲರು ತಿಳಿಸಿದ್ದಾರೆ.
ಪೂನಾವಾಲಾ ಅವರಿಗೆ ಕೇಂದ್ರ ಸರ್ಕಾರ ಈಗಾಗಲೇ ವೈ ಕೆಟಗರಿ ಭದ್ರತೆ ನೀಡಿದೆ.