ನವದೆಹಲಿ: ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದ ನಂತರ ತನಗೂ, ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಬಂದಿರುವುದಾಗಿಯೂ, ಉತ್ತರ ಪ್ರದೇಶದ ಪೊಲೀಸರು, ಮಾಧ್ಯಮಗಳು ಮತ್ತು ಕೆಲ ಗುಂಪುಗಳು ತಮ್ಮ ಬೆನ್ನುಬಿದ್ದಿರುವುದಾಗಿಯೂ ಆರೋಪಿಸಿರುವ ಮಹಿಳೆಯೊಬ್ಬರು, ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಉದ್ಯೋಗ ನಿಮಿತ್ತ ದೆಹಲಿಯಲ್ಲಿ ನೆಲೆಸಿರುವ ಮಹಿಳೆಯು ಉತ್ತರ ಪ್ರದೇಶದ ಶಹಜಹಾನ್‌ಪುರದವರಾಗಿದ್ದು. ‘ಮತಾಂತರವಾದಾಗಿನಿಂದಲೂ ನನ್ನನ್ನು ಮತ್ತು ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಸುದ್ದಿಯನ್ನು ಪ್ರಕಟಿಸಲಾಗುತ್ತಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು,’ ಎಂದೂ ಆಕೆ ಕೋರಿದ್ದಾರೆ.
ರೇಣು ಗಂಗ್ವಾರ್ ಅಲಿಯಾಸ್ ಆಯೆಷಾ ಅಲ್ವಿ ಅವರು ಮೇ 27 ರಂದು ದೆಹಲಿಯಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಆದರೆ, ಜೂನ್ 23ರಂದು ಶಹಜಹಾನ್ಪುರಕ್ಕೆ ಬಂದಾಗಿನಿಂದ ಮಾಧ್ಯಮಗಳು ಅವರ ಹಿಂದೆ ಬಿದ್ದಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅನುಮತಿಯಿಲ್ಲದೆ ನಾನಿದ್ದ ಜಾಗಕ್ಕೆ ಬಂದ ಮಾಧ್ಯಮದ ಕೆಲ ವರದಿಗಾರರು ನನ್ನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ. ಅಂದಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ‘ಮತಾಂತರಗೊಂಡಿರುವ ಸುದ್ದಿ ಬಿತ್ತರಿಸುವುದಾಗಿಯೂ, ಹಣ ನೀಡುವಂತೆಯೂ, ಪ್ರಕರಣ ದಾಖಲಿಸುವುದಾಗಿಯು‘ ಬೆದರಿಕೆ ಹಾಕಲಾಗುತ್ತಿದೆ ಎಂದು ಯುವತಿ ಆರೋಪಿಸಿದ್ದಾರೆ.