Tuesday, May 30, 2023

ಉಗ್ರರ ಚಟುವಟಿಕೆ ತಾಣವಾದ ಕರಾವಳಿ : ಮಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ-ಸೇನಾ ನೆಲೆ ತೆರೆಯಲು ವಿಹೆಚ್ ಪಿ ಆಗ್ರಹ..!

ಮಂಗಳೂರು :  ಉಳ್ಳಾಲದ ಕೆಲವು ಯುವಕರಿಗೆ ಉಗ್ರರೊಂದಿಗೆ ನಂಟು ಇರುವುದು ಇದೀಗ ಸಾಬೀತಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ ಹಾಗೂ ಸೇನಾ ನೆಲೆ ತೆರೆಯಲು ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದು ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಐಸಿಸ್ ಉಗ್ರರೊಂದಿಗೆ ನಂಟು ಇರುವ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಬುಧವಾರ ಹಲವು ಕಡೆ ದಾಳಿ ನಡೆಸಿದ್ದು, ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗ ಅಮ್ಮರ್ ಅಬ್ದುಲ್ ರಹಮಾನ್ ನನ್ನು ಬಂಧಿಸಿದ್ದಾರೆ. ಆತ ಸಾಮಾಜಿಕ ಜಾಲತಾಣದ ಮೂಲಕ ಉಗ್ರಗಾಮಿ ಸಂಘಟನೆಗೆ ಹಣ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಬಂಧನ ನಡೆದಿದೆ. ಈ ಘಟನೆ ಜಿಲ್ಲೆಗೆ ಕಪ್ಪುಚುಕ್ಕೆಯೂ ಹೌದು, ಹಾಗೆಯೇ ಜಿಲ್ಲೆಯ ಜನ ಭಯಭೀತರಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದರು.
ಐಸಿಸ್ ನಂಟಿನ ಕಾರಣದಿಂದ ಎನ್ಐಎಯಿಂದ ಬಂಧಿತನಾದ ಉಳ್ಳಾಲದ ಬಾಷಾ ಕುಟುಂಬದ ಅಮ್ಮರ್ ಅಬ್ದುಲ್ ರಹಮಾನ್ ನಂತಹ ಹಲವು ಯುವಕರು ಐಸಿ ಸ್ ನೊಂದಿಗೆ ನಂಟು ಇರಬಹುದು ಎಂದು ಸಂಶಯಿಸಿದ ಅವರು ಜಿಲ್ಲೆ ಹಾಗೂ ಕರಾವಳಿಯ ಕೇಂದ್ರಸ್ಥಾನವಾದ ಮಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ ಹಾಗೂ ಸೇನಾ ನೆಲೆ ತೆರೆಯಲು ಆಗ್ರಹಿಸಿ ಗುರುವಾರ ತೊಕ್ಕೊಟ್ಟಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಂಧಿತ ಆರೋಪಿಯ ಕುರಿತಾಗಿ ವಿಶೇಷವಾದ ತನಿಖೆ ನಡೆಸಬೇಕಿದೆ. ಆತನ ಜೊತೆ ಕೈಜೋಡಿಸಿದವರು, ಆತನ ನಂಟಿನ ಕುರಿತು ಪತ್ತೆ ಹಚ್ಚಬೇಕು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ದೇಶದ ಯಾವುದೇ ಮೂಲೆಯಲ್ಲಿ ಬಂಧನವಾದರೂ ಆ ಉಗ್ರರ ಜೊತೆಗೆ ಜಿಲ್ಲೆಯ ನಂಟು ಕಂಡು ಬಂದಿದೆ. ಭಟ್ಕಳದ ಉಗ್ರಗಾಮಿಗಳಾಗಿರು ಭಟ್ಕಳ ಸಹೋದರರು ಕೂಡಾ ಇಲ್ಲಿಯ ನಂಟು ಹೊಂದಿರುವವರಾಗಿದ್ದು ಆ ಸಂದರ್ಭ ಬಾಂಬ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯೊಬ್ಬನನ್ನು ಮುಕ್ಕಚ್ಚೇರಿಯಿಂದ ಬಂಧಿಸಲಾಗಿರುವುದು ನೆನಪಿಸಬೇಕಾದ ಸಂಗತಿ ಎಂದರು.
ಸಿರಿಯಾದಲ್ಲಿ ನಡೆದ ಉಗ್ರಗಾಮಿಗಳು ಹಾಗೂ ಪೊಲೀಸರ ನಡುವಿನ ಹೋರಾಟದಲ್ಲಿ ಕಾಸರಗೋಡಿನಿಂದ ಐಸಿಸ್ ಸೇರಿದ್ದ ಬಹಳಷ್ಟು ಯುವಕರು ಸತ್ತಿದ್ದು ಐಸಿಸ್ ನಂಟು ಉಳ್ಳಾಲಕ್ಲೂ ಅಂಟಿದೆ. ಮಂಗಳೂರಿನಲ್ಲಿ ಗೋಡೆ ಬರಹದ ಮೂಲಕ ಭಯ ಹುಟ್ಟಿಸಿದ್ದಾರೆ, ಎನ್ ಆರ್ ಸಿ ಪ್ರತಿಭಟನೆ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು ಜಿಲ್ಲೆಯ ಕರಾವಳಿ ಭಾಗವನ್ನು ಭಯೋತ್ಪಾದನಾ ಕೇಂದ್ರವನ್ನಾಗಿ ಮಾಡಲು ಷಡ್ಯಂತರ ನಡೆಯುತ್ತಿದ್ದು ಆ ಕಾರಣದಿಂದ ಎನ್ಐಎ ಕಚೇರಿ ಹಾಗೂ ಕರಾವಳಿಯಲ್ಲಿ ಸೇನಾ ನೆಲೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು‌ ಒತ್ತಾಯಿಸಿದರು.
ಉಳ್ಳಾಲದ ಆರೋಪಿಯ ಬಂಧನದ ಹಿಂದೆ ಉಳ್ಳಾಲದಲ್ಲಿ ಸಮಾಜದ್ರೋಹಿ, ದೇಶದ್ರೋಹಿ ಚಟುವಟಿಕೆಯ ಷಡ್ಯಂತರ ನಡೆಯುತ್ತಿದ್ದು ಹಲವು ಕಾಂಗ್ರೆಸ್ ಮುಖಂಡರ ಮೃದು ಧೋರಣೆಯಿಂದ ಇಂತಹ ಕೃತ್ಯ ನಡೆಯುತ್ತಿದೆ. ಇಲ್ಲಿನ‌ ಶಾಸಕರು ಒಂದು ಭಾಗದ ಶಾಸಕರಾಗಿದ್ದಾರೆ ಎಂಬ ನಂಬಿಕೆಯಿಂದ ಕೆಲವರು ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಹುದು ಎಂಬ ಸಂಶಯ ಇದೆ. ಈ ಭಾಗದಲ್ಲಿ ದೈವಸ್ಥಾನ, ದೇವಸ್ಥಾನಕ್ಕೆ ಅಪಚಾರ ಎಸಗುವ ಕೃತ್ಯ ಪದೇ ಪದೇ ನಡೆಯುತ್ತಿದ್ದು ಅಂತಹ ಕೃತ್ಯದಲ್ಲಿ ತೊಡಗಿಸಿಕೊಂಡ ಸಂಶಯಿತ ಯುವಕರ ಕುರಿತು ಜನರು ಉಳ್ಳಾಲ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ರೀತಿಯಲ್ಲಿ ದೇಶದ್ರೋಹಿ, ಸಮಾಜದ್ರೋಹಿ, ಭಯೋತ್ಪಾದನೆಯಂತಹ ಅಕ್ರಮ ಚಟುವಟಿಕೆಯ ವಿರುದ್ಧದ ಹೋರಾಟದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಸದಾ ಸನ್ನದ್ಧವಾಗಿದೆ. ಹಾಗೆಯೇ ಬಂಧಿತ ಉಗ್ರನ ಮನೆಯ
ಸೊಸೆಯೊಬ್ಬಳು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವಳಾಗಿದ್ದು ಅವರ ಕುಟುಂಬದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗ ದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ವಿಶ್ವ ಹಿಂದು ಪರಿಷತ್ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ ಹಾಗೂ ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics