ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ನವೀನ್ ಆರ್. ಡಿ’ಸೋಜಾ ಅವರು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇದೀಗ ಚರಂಡಿ, ತಡೆಗೋಡೆ ನಿರ್ಮಾಣದಂತಹ ಸಣ್ಣ ಪುಟ್ಟ ಕೆಲಸಗಳಿಗೂ ಕೆಯುಐಡಿಎಫ್‌ಸಿ ಯಿಂದ ಸಾಲ ಪಡೆಯುವ ಪ್ರಸ್ತಾಪವನ್ನು ಮಂಡಿಸಲಾಗುತ್ತಿದೆ. ಯಾಕೆ ಹೀಗೆ ? ಮಹಾನಗರ ಪಾಲಿಕೆಯಲ್ಲಿ ಅನುದಾನ ಲಭ್ಯವಿಲ್ಲವೇ ? ಅಷ್ಟೊಂದು ಅರ್ಥಿಕ ಕೊರತೆ ಎದುರಾಗಿದೆಯೇ ಎಂದು ಪ್ರಶ್ನಿಸಿದರು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ 27 ಕೋಟಿ 25 ಲಕ್ಷ 50 ಸಾವಿರ ರೂಪಾಯಿ ಸಾಲ ಪಡೆಯುವ ಪ್ರಸ್ತಾಪ ಮಂಡಿಸಲಾಗಿದೆ. ಸರಕಾರದ ಅನುಮೋದನೆ ಇಲ್ಲದೆ ಈ ಸಾಲ ಪಡೆಯಲಾಗುತ್ತದೆ. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರು ಕಾಮಗಾರಿಗಳ ಪ್ರಸ್ತಾವನೆ ಕೊಟ್ಟಿದ್ದಾರೆ.
ಶಾಸಕರು ಸರಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಮಹಾನಗರ ಪಾಲಿಕೆಯ ಅನುದಾನವನ್ನು ಬಳಸಿಕೊಂಡು ಕಾಮಗಾರಿ ನಡೆಸುತ್ತಿರುವುದು ವಿಪರ್ಯಾಸ.
ಮಹಾನಗರ ಪಾಲಿಕೆಯ ಅನುದಾನದ ಅಧಿಕಾರ ಇರುವುದು ಮೇಯರ್ ಗೆ ಮಾತ್ರ. ಶಾಸಕರಿಗಿಲ್ಲ.
ಚರಂಡಿ, ತಡೆಗೋಡೆ ನಿರ್ಮಾಣದಂತಹ ಸಣ್ಣ ಕಾಮಗಾರಿಗಳಿಗೆ ಸಾಲ ಪಡೆಯುವುದಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಮಹಾನಗರ ಪಾಲಿಕೆಯಿಂದ ಕಂಟ್ರಾಕ್ಟುದಾರರಿಗೆ ಪಾವತಿಸಲು 30 ಕೋಟಿ ರೂಪಾಯಿ ಬಾಕಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಗಳಾದ ಎಂ. ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಕೇಶವ ಮರೋಳಿ, ಅನಿಲ್ ಕುಮಾರ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.