ಉಡುಪಿ: ಕಾಪು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶಪುಣ್ಯೋತ್ಸವ ನಡೆಯುತ್ತಿದ್ದು, ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮೊದಲಿಗೆ ಕ್ಷೇತ್ರದೊಳಗೆ ಆಗಮಿಸಿ ಶ್ರೀ ದೇವಿ ದರುಶನ ಪಡೆದುಕೊಂಡ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಳಿಕ ಮಾತನಾಡಿದ ಅವರು ‘ಮಹಾಲಕ್ಷ್ಮೀ ಹೆಸರಿನಲ್ಲಿಯೇ ಶಕ್ತಿ ಇದೆ. ಮಹಾಲಕ್ಷ್ಮೀ ಕೃಪೆ ಆದವರು ಬದುಕಿನಲ್ಲಿ ಅತ್ಯಂತ ಯಶಸ್ವಿ ಆಗುತ್ತಾರೆ’ ಎಂದರು.
ಸಾಹಸ ಅನ್ನುವುದು ಕರಾವಳಿ ಜನರ ಗುಣಧರ್ಮ ಆಗಿದೆ. ಮೊಗವೀರರದ್ದು ಸಾಹಸವೇ ಗುಣಧರ್ಮವಾಗಿದೆ. ಮೊಗವೀರರು ಕಠಿಣಪರಿಶ್ರಮಿಗಳು ಎಂದರು.
ಮೀನುಗಾರಿಕೆಗೆ ಹೊಸತಂತ್ರಜ್ಞಾನದ ಬಳಕೆ ಮಾಡಿ ಹೆಚ್ಚಿನ ಮೀನುಗಾರಿಕೆ ಮಾಡಿಸಲು 100 ಹೈಸ್ಪೀಡ್ ಬೋಟುಗಳನ್ನು ಕೊಡುತ್ತೇವೆ. 5000 ಮನೆ ಕಟ್ಟಿಕೊಡುವ ಯೋಜನೆಗಳನ್ನು ಮೀನುಗಾರರಿಗೆ ರೂಪಿಸಲಾಗಿದೆ. 8 ಬಂದರುಗಳ ಡ್ರೆಜ್ಜಿಂಗ್‌ಗೆ ವಿಶೇಷ ಅನುದಾನ ನೀಡಲಾಗಿದೆ ಒಟ್ಟಿನಲ್ಲಿ ಮೀನುಗಾರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ.
ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನೆರವು ಅಲ್ಲದೆ ಮೊಗವೀರರ ಬೇಡಿಕೆಗೆ ಸ್ಪಂದಿಸುವುದಾಗಿ ನುಡಿದರು. ಸಭೆಯಲ್ಲಿ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್, ಸಾರಿಗೆ ಸಚಿವ ಶ್ರೀರಾಮುಲು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸುಕುಮಾರ್ ಶೆಟ್ಟಿ, ರಘುಪತಿ ಭಟ್,
ಲಾಲಾಜಿ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮೊದಲಾದವರಿದ್ದರು.
ನಾಡೋಜ ಜಿ ಶಂಕರ್ ಸರ್ವರನ್ನು ಸ್ವಾಗತಿಸಿ ತಮ್ಮ ಹತ್ತುಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಮೊಗವೀರರಿಗಾಗಿ ಹಾಸ್ಟೆಲ್ ಸೌಕರ್ಯ ಮಾಡಿಸಲು ಮುಂದಾಗಬೇಕು ಎಂದರು.
ಸಬ್ಸಿಡಿ ಡೀಸೆಲ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟರು. ಮೀನುಗಾರಿಕಾ ವಿಶ್ವವಿದ್ಯಾನಿಲಯ, ಮಹಿಳಾ ಮೀನುಗಾರರಿಗೆ ಸಾಲ ಸೌಲಭ್ಯದ ಯೋಜನೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟರು.