ಮಂಗಳೂರು : ಮುಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ಮನೆಯ ಸಮೀಪ ಆಟವಾಡುತ್ತಿದ್ದ ಯುವರಾಜ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ಸಿಮೆಂಟಿನ ಪೈಪು ಉರುಳಿಬಿದ್ದು ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
ಮುಲ್ಕಿಯ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ ರಾಮು ಮತ್ತು ಶಾಂತ ಎಂಬವರ ನಾಲ್ವರು ಪುತ್ರರಲ್ಲಿ ಕೊನೆಯವನಾದ ಯುವರಾಜ ರ ಸಂಜೆಗೆ ಮನೆಯ ಸಮೀಪದಲ್ಲಿರುವ ಗುತ್ತಿಗೆದಾರ ನಾಗರಾಜ ಎಂಬವರ ಯಾರ್ಡಿನಲ್ಲಿ ರಾಶಿ ಹಾಕಿರುವ ಸಿಮೆಂಟಿನ ಪೈಪುಗಳ ಯಾರ್ಡಿನಲ್ಲಿ ಆಟವಾಡಲು ತೆರಳಿದ್ದ. ಎನ್ನಲಾಗಿದೆ.
ಮಗು ಆಟವಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಸಿಮೆಂಟಿನ ಪೈಪ್ ಉರುಳಿ ಮಗುವಿನ ಮೇಲೆ ಬಿದ್ದಿದೆ ಎನ್ನಲಾಗಿದೆ.
ಈ ಸಂದರ್ಭ ಸ್ಥಳದಲ್ಲಿ ಆಟವಾಡುತ್ತಿದ್ದ ಉಳಿದ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಮಕ್ಕಳ ಬೊಬ್ಬೆ ಕೇಳಿ ಮನೆಯವರು ಓಡಿ ಬಂದು ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮುಲ್ಕಿ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.