ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಆವರಣ ಇಲ್ಲದ ಬಾವಿಗೆ ಬಿದ್ದ ಘಟನೆ ಬೇಕಲ ಸಮೀಪದ ಪೂಚಕ್ಕಾಡ್ ಎಂಬಲ್ಲಿ ನಿನ್ನೆ ಸಂಜೆ ನಡೆದಿದ್ದು, ಕಾರಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಬಾವಿಯಲ್ಲಿ ಸಿಲುಕಿದ್ದ ನಾಲ್ವರನ್ನು ಪರಿಸರವಾಸಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆವರಣ ಇಲ್ಲದ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಪರಿಸರವಾಸಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಮೂವರನ್ನು ಸ್ಥಳೀಯ ಯುವಕರು ಕಾರಿನಿಂದ ಹೊರತೆಗೆದು ಮೇಲಕ್ಕೆತ್ತಿದರು.
ಓರ್ವನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬಾವಿಗೆ ಬಿದ್ದ ಕಾರು ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು. ಕಾರಿನ ಗಾಜು ಹಾಗೂ ಬಾಗಿಲು ಒಡೆದು ನಾಲ್ವರನ್ನು ಹೊರೆತೆಗೆದು ಮೇಲಕ್ಕೆ ಎತ್ತಿ ರಕ್ಷಿಸಲಾಯಿತು.
ಕಾರಿನಲ್ಲಿದ್ದವರು ಉದುಮ ನಿವಾಸಿಗಳಾಗಿದ್ದು, ಕಾರನ್ನು ಕ್ರೇನ್ ಬಳಸಿ ಹೊರತೆಗೆಯಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.