ಬಂಟ್ವಾಳ ಬಿಜೆಪಿ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣ : ಮೂವರು ಆರೋಪಿಗಳ ಬಂಧನ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿನ ಫೋಟೋಗ್ರಾಫರ್ ಹಾಗೂ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ನಿನ್ನೆ ರಾತ್ರಿ ನಡೆದ ಮಾರಣಾಂತಿಕ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೋರ್ವ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಂಧಿತ ಆರೋಪಿಗಳನ್ನು ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್ (19), ಅಬ್ದುಲ್ ರೆಹಮಾನ್ (22) ಮತ್ತು ಮಹಮ್ಮದ್ ಸೈಪುದ್ದೀನ್ (22) ಎಂದು ಗುರುತ್ತಿಸಲಾಗಿದೆ.
ಮತ್ತೋರ್ವ ಆರೋಪಿ ಸವಾದ ನ ಬಂದನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ 7.45ರ ಸುಮಾರಿಗೆ ಈ ಘಟನೆ ನಡೆದಿತ್ತು.
ಪುದು ಗ್ರಾಮದ ಕೊಟ್ಟಿಂಜ ನಿವಾಸಿ ದಿನೇಶ್ ಶೆಟ್ಟಿ ಎಂಬವರ ಸ್ಟುಡಿಯೋಕ್ಕೆ ಫೊಟೊ ತೆಗೆಸುವ ನೆಪದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸ್ಟುಡಿಯೋಗೆ ನುಗ್ಗಿ ಅವರ ಮೇಲೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿತ್ತು.
ನಾಲ್ಕು ಮಂದಿಯ ತಂಡ ದಾಳಿ ನಡೆಸಿದ್ದು, ಕತ್ತಿಯಿಂದ ದಿನೇಶ್ ಶೆಟ್ಟಿಯವರ ತಲೆಗೆ, ಬಲ ಕೈಗೆ ಹಾಗೂ ಕಿಬ್ಬೊಟ್ಟೆಗೆ ಇರಿದಿದ್ದರು.
ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ರವರು ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಸ್ಟೀಲ್ ಕುರ್ಚಿಯಿಂದ ದುಷ್ಕರ್ಮಿಗಳ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ದಿನೇಶರನ್ನು ಪರಾರಿಯಾಗಿದ್ದರು.
ಈ ಮಧ್ಯೆ ತೀವ್ರ ಹಲ್ಲೆಗೊಳಗಾದ ದಿನೇಶ್ ಕೊಟ್ಟಿಂಜಗೆ ಮಂಗಳೂರು ಖಾಸಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ದಿನೇಶ್ ಅವರ ಹೊಟ್ಟೆ ಕೈಗೆ ಮತ್ತು ತಲೆಗೆ ತೀವ್ರ ತೆರನಾದ ಗಾಯಗಳಾಗಿವೆ,.
ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ.
ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳೊಡನೆ ಮಾತನಾಡಿ ಈ ದುರ್ಘಟನೆಗೆ ಕಾರಣರಾದ ಹಲ್ಲೆಕೋರರನ್ನು ತಕ್ಷಣ ಬಂಧಿಸುವಂತೆ ಸೂಚಿಸಿದ್ದಾರೆ.
ರಾಜ್ಯದ ಗೃಹಸಚಿವರಾದ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡಾ.ಭರತ್ ಶೆಟ್ಟಿಯವರು ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡಲು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡುಬಿದಿರೆ, ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್, ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಅನೇಕ ಕಾರ್ಯಕರ್ತರು ಭೇಟಿ ನೀಡಿದರು.